ಧಾರವಾಡ: ಮೇ 17ರವರೆಗೆ ಲಾಕ್ಡೌನ್ ಜಾರಿಯಲ್ಲಿದ್ದು, ಮಾಸ್ಕ್ ಧರಿಸದವರು ಹಾಗೂ ಕಂಡಕಂಡಲ್ಲಿ ಉಗುಳುವವರಿಗೆ ಪಾಲಿಕೆ ಅಧಿಕಾರಿಗಳು ಬಿಸಿ ಮುಟ್ಟಿಸುತ್ತಿದ್ದಾರೆ. ನಗರದ ವಿವಿಧೆಡೆ ಬುಧವಾರ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ, 9,000 ರೂ. ದಂಡ ವಸೂಲಿ ಮಾಡಿದೆ.
ಅಗತ್ಯ ಕೆಲಸಗಳಿಗೆ ನಗರಕ್ಕೆ ಆಗಮಿಸುವ ಸಾರ್ವಜನಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದಾಗ್ಯೂ ನಿಷ್ಕಾಳಜಿ ತೋರಿದವರಿಗೆ ದಂಡ ವಿಧಿಸುವ ಮೂಲಕ ಪಾಠ ಕಲಿಸಿದ್ದಾರೆ. ಮಂಗಳವಾರ ಸಂಜೆಯಿಂದ ಈ ಅಭಿಯಾನ ಆರಂಭವಾಗಿದ್ದು, ಬುಧವಾರ ಸಂಜೆವರೆಗೆ ಒಬ್ಬರಿಗೆ 200 ರೂ.ಗಳಂತೆ 9,000 ರೂ. ದಂಡ ವಸೂಲಿ ಮಾಡಿದ್ದಾರೆ. ವಲಯ 3ರ ಸಹಾಯಕ ಆಯುಕ್ತ ಆರ್.ಎಂ. ಕುಲಕರ್ಣಿ, ವಲಯ 2ರ ಹಂಚಿನಮನಿ, ಪರಿಸರ ಅಭಿಯಂತರ ಎಂ.ಎನ್. ನವೀನ, ಹಿರಿಯ ಆರೋಗ್ಯ ನಿರೀಕ್ಷಕ ಮಹಾಂತೇಶ ಮ್ಯಾಗೇರಿ ನೇತೃತ್ವದಲ್ಲಿ ಸಿಬ್ಬಂದಿ, ಮಾಸ್ಕ್ ಧರಿಸದವರನ್ನು ಪತ್ತೆ ಮಾಡಿ ದಂಡ ವಿಧಿಸಿದರು.