ಚಿಕ್ಕಬಳ್ಳಾಪುರ: ಕರೊನಾ ನಾಲ್ಕನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಘೋಷಿಸಿರುವ ಮುಂಜಾಗ್ರತಾ ನಿಯಮಗಳ ಪಾಲನೆಯು ಜಿಲ್ಲೆಯಲ್ಲಿ ಕಂಡು ಬಂದಿಲ್ಲ.
ಏ.25ರಿಂದ ಸೋಂಕಿನ ನಿಯಂತ್ರಣಕ್ಕಾಗಿ ಕಡ್ಡಾಯ ಮಾಸ್ಕ್ ಧಾರಣೆ, ಗುಂಪು ಸೇರದಿರುವಿಕೆ, ಪರಸ್ಪರ ಅಂತರ ಕಾಪಾಡಿಕೊಳ್ಳುವಿಕೆ, ಎಲ್ಲೆಂದರಲ್ಲಿ ಉಗುಳುವಿಕೆಗೆ ನಿಷೇಧದ ನಿಯಮವನ್ನು ಮತ್ತೊಮ್ಮೆ ನೆನಪಿಸಿ ಆದೇಶ ಹೊರಡಿಸಲಾಗಿದೆ. ಇದರ ನಡುವೆ ವಿಜಯವಾಣಿ ರಿಯಾಲಿಟಿ ಚೆಕ್‌ನಲ್ಲಿ ಬಹುತೇಕ ಜಿಲ್ಲಾದ್ಯಂತ ಯಾವುದೇ ನಿಯಮ ಪಾಲನೆಯಾಗದಿರುವುದು ತಿಳಿದು ಬಂದಿದೆ.
ಜಿಲ್ಲೆಯಲ್ಲಿ ಕರೊನಾ ನಿಯಂತ್ರಣದಲ್ಲಿದ್ದು, ಸೋಂಕು ಮುಕ್ತ ಪ್ರದೇಶವಾಗಿದೆ. ಹೀಗಿರುವಾಗ ನಾಲ್ಕನೇ ಅಲೆ ಹಿನ್ನೆಲೆಯಲ್ಲಿ ಮತ್ತೆ ಪ್ರಕರಣಗಳು ಹೆಚ್ಚಳವಾಗುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೇವಲ ಆದೇಶದಲ್ಲಿ ಜಾಗೃತರಾಗಿದ್ದು, ನಿಯಮ ಪಾಲನೆ ಉಲ್ಲಂಘನೆಗೆ ಪ್ರಮುಖ ಕಾರಣವಾಗಿದೆ.
ಈಗಾಗಲೇ ದೆಹಲಿ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಪ್ರಕರಣಗಳ ಸಂಖ್ಯೆ ಏರುಮುಖದಲ್ಲಿವೆ. ಬೆಂಗಳೂರಿನಲ್ಲೂ ಇದೇ ಪರಿಸ್ಥಿತಿ. ಇನ್ನು ಜಿಲ್ಲೆಗೆ ಹೊರ ಭಾಗದ ಜನರು ಬಂದು ಹೋಗುವಿಕೆ, ಹೊರ ಭಾಗಗಳಿಗೆ ಸ್ಥಳೀಯರ ಪ್ರಯಾಣ ಎಂದಿನಂತೆ ಮಾಮೂಲಿಯಾಗಿ ನಡೆಯುತ್ತಿದೆ. ಮತ್ತೊಂದೆಡೆ ಜಿಲ್ಲೆಯಲ್ಲಿ ಗುಂಪು ಸೇರುವಿಕೆಯ ಧಾರ್ಮಿಕ ಮಹೋತ್ಸವಗಳು, ಕಾರ್ಯಕ್ರಮಗಳು, ಸಭೆ ಮತ್ತು ರ‌್ಯಾಲಿಗಳಿಗೂ ಯಾವುದೇ ಅಡ್ಡಿ ಇಲ್ಲ. ಇದರ ನಡುವೆ ಸಾಮಾಜಿಕ ಅಂತರ ಕಾಪಾಡುವಿಕೆಯಲ್ಲಿ ನಿರ್ಲಕ್ಷೃ, ಮಾಸ್ಕ್ ಧರಿಸದಿರುವುದು, ಒಂದೆಡೆ ಗುಂಪು ಸೇರುವಿಕೆಯ ದೃಶ್ಯಗಳು ಕಂಡು ಬರುತ್ತಿವೆ. ಇದು ಸಹಜವಾಗಿ ಮತ್ತೆ ಸೋಂಕು ಪ್ರಕರಣಗಳ ಹೆಚ್ಚಳದ ಆತಂಕ ಮೂಡಿಸಿದೆ.
ಹೇಳುವವರಿಂದಲೇ ಉಲ್ಲಂಘನೆ: ಕರೊನಾ ಆತಂಕ, ನಿಯಮಗಳ ಜಾರಿ ಮಹತ್ವದ ಬಗ್ಗೆ ಪಾಠವನ್ನು ಹೇಳಿ ಕೊಡುತ್ತಿರುವ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೇ ನಿಯಮ ಉಲ್ಲಂಘನೆಗೆ ಪ್ರಮುಖ ಕಾರಣವಾಗುತ್ತಿದ್ದಾರೆ. ನಾನಾ ಕಾರಣಗಳ ನೆಪದಲ್ಲಿ ಜನರನ್ನು ಒಂದೆಡೆ ಸೇರಿಸುತ್ತಿದ್ದಾರೆ. ಇಷ್ಟಾದರೂ ಹೇಳುವ ಜಾಗೃತಿ ಸಂದೇಶಗಳಿಗೇನೂ ಕಡಿಮೆ ಇಲ್ಲ.
ದಂಡವಿಲ್ಲ, ಸ್ವಯಂ ಅರಿವು ಅಗತ್ಯ: ನಿಯಮಗಳ ಜಾರಿ ಆದೇಶ ಹೊರಡಿಸದಿದ್ದರೂ ಉಲ್ಲಂಘನೆಯ ಪ್ರಕರಣಗಳಲ್ಲಿ ದಂಡ ವಿಧಿಸುವ ನಿಟ್ಟಿನಲ್ಲಿ ಸ್ಪಷ್ಟ ಸೂಚನೆ ಇಲ್ಲ. ಇದರಿಂದ ಜನರೇ ಸ್ವಯಂ ಪ್ರೇರಣೆಯಿಂದ ನಿಯಮ ಪಾಲಿಸಬೇಕಾಗಿದೆ. ಇಲ್ಲದಿದ್ದಲ್ಲಿ ಕಾಯಿಲೆ ಬಂದಾಗ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂಬುದಾಗಿ ತಜ್ಞ ವೈದ್ಯರು ತಿಳಿಸಿದ್ದಾರೆ.
ಶೂನ್ಯ ಪ್ರಕರಣಗಳು: ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು ಮತ್ತು ಪ್ರತಿದಿನ ಹೊಸ ಪ್ರಕರಣಗಳ ಪತ್ತೆ ಪ್ರಮಾಣವು ಶೂನ್ಯದಲ್ಲಿದೆ. ಇನ್ನು ಇಲ್ಲಿಯವರೆಗೂ 13,15,644 ಮಾದರಿಗಳ ಪರೀಕ್ಷೆ ನಡೆಸಿದ್ದು, 12,49,727 ಮಾದರಿಗಳು ನೆಗೆಟಿವ್ ಆಗಿದೆ. 55,632 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 55,171 ಮಂದಿ ಸೋಂಕು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 461 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಕರೊನಾ ಲಸಿಕಾರಣಕ್ಕೆ ಸಂಬಂಧಿಸಿದಂತೆ ಎರಡು ಮತ್ತು ಬೂಸ್ಟರ್ ಡೋಸ್ ಸೇರಿ 21,42,225 ಲಸಿಕೆ ನೀಡಲಾಗಿದೆ. ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳು ಕರೊನಾ ಮುಕ್ತ ಪ್ರದೇಶಗಳಾಗಿವೆ.
ಕರೊನಾ ಸೋಂಕಿನ ಬಗ್ಗೆ ಆತಂಕಪಡುವ ಅವಶ್ಯಕತೆ ಇಲ್ಲ. ಆದರೆ, ನಿರ್ಲಕ್ಷಿೃಸಬಾರದು. ಕಡ್ಡಾಯವಾಗಿ ಮುಂಜಾಗ್ರತಾ ಕ್ರಮಗಳ ಪಾಲನೆಯೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನರಸಿಂಹಮೂರ್ತಿ, ವೈದ್ಯ, ಚಿಕ್ಕಬಳ್ಳಾಪುರ