ಮೈಸೂರು: ಮಾಸಿಕ ಗೌರವಧನ ಹತ್ತು ಸಾವಿರ ರೂ. ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಮೂರು ದಿನಗಳ ಪ್ರತಿಭಟನಾ ಧರಣಿಯನ್ನು ಮಂಗಳವಾರದಿಂದ ಕೈಗೊಂಡಿದ್ದಾರೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆಶಾ ಕಾರ್ಯಕರ್ತೆಯರು ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದು, ನಗರದಲ್ಲೂ ಸ್ಪಂದನೆ ವ್ಯಕ್ತವಾಗಿದೆ. ನಗರದ ಗಾಂಧಿ ವೃತ್ತದ ಬಳಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಹೋರಾಟಕ್ಕೆ ಚಾಲನೆ ನೀಡಲಾಗಿದೆ.
ಮುಖ್ಯಮಂತ್ರಿ ಘೋಷಿಸಿದಂತೆ ರಾಜ್ಯ ಗೌರವಧನ, ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ ಆಶಾ ಕಾರ್ಯಕರ್ತೆಯರ 10 ಸಾವಿರ ರೂ. ಮಾಸಿಕ ಗೌರವಧನವನ್ನು ಏಪ್ರಿಲ್‌ನಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರ ಆದೇಶಿಸಬೇಕು ಎಂದು ಆಗ್ರಹಿಸಿದರು.
ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ ಮಾತನಾಡಿ, ಜನವರಿಯಲ್ಲಿ ನಡೆದ ರಾಜ್ಯ ಮಟ್ಟದ ಹೋರಾಟದ ಫಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ತಿಂಗಳು 10 ಸಾವಿರ ರೂ. ನಿಶ್ಚಿತ ಗೌರವಧನ ನೀಡುವುದಾಗಿ ಘೋಷಿಸಿದ್ದರು. ಆದರೆ, ಜಾರಿಯಾಗಲಿಲ್ಲ.
ಬಜೆಟ್‌ನಲ್ಲಿ ಘೋಷಿಸಿದ 1000 ರೂ. ಪ್ರೋತ್ಸಾಹಧನ ಸಹ 42,000 ಆಶಾ ಕಾರ್ಯಕರ್ತೆಯರ ಪೈಕಿ ಸುಮಾರು 12,000 ಜನರಿಗೆ ಮಾತ್ರವೇ ದೊರೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು ಹೋರಾಟಕ್ಕಿಳಿದಿದ್ದಾರೆ. ಕೇರಳದ ಆಶಾ ಕಾರ್ಯಕರ್ತೆಯರ ಹೋರಾಟದ ಮಾದರಿ ಈ ಹೋರಾಟ ಸಹ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಕಾಳಚನ್ನೇಗೌಡ ಮಾತನಾಡಿ, ಆಶಾ ಕಾರ್ಯಕರ್ತೆಯರ ಶ್ರಮದ ಫಲವಾಗಿ ಶಿಶು-ತಾಯಂದಿರ ಮರಣ ಪ್ರಮಾಣ ಕಡಿಮೆಯಾಗಿದೆ. ಆದರೆ, ಸತತವಾಗಿ ಪರಿಶ್ರಮಪಡುತ್ತಿರುವ ಇವರಿಗೆ ಸೌಲಭ್ಯ ನೀಡುವಲ್ಲಿ ಸರ್ಕಾರವು ಹಿಂದೇಟು ಹಾಕುತ್ತಿದೆ.
ಪ್ರತಿಯೊಂದು ಹಕ್ಕನ್ನೂ ಹೋರಾಟದ ಮೂಲಕವೇ ಪಡೆಯುವಂತಾಗಿದೆ. ಈ ಹಿಂದೆ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಸಿಎಂ ಭರವಸೆ ನೀಡಿದಂತೆ ಹತ್ತು ಸಾವಿರ ರೂ. ನಿಗದಿತ ಗೌರವಧನ ನೀಡಬೇಕು ಎಂದು ಆಗ್ರಹಿಸಿದರು.
ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೂ ಒಂದು ಸಾವಿರ ರೂ. ಪ್ರೋತ್ಸಾಹಧನ ನೀಡಬೇಕು. ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಆಶಾಗಳು ಕಾರ್ಯನಿರ್ವಹಿಸುವ ಜನಸಂಖ್ಯೆಯ ಮಿತಿಯನ್ನು ಹೆಚ್ಚಿಸುವುದನ್ನು ಕೈಬಿಡಬೇಕು. ಈ ಹೆಸರಿನಲ್ಲಿ ಯಾರನ್ನೂ ಕೆಲಸದಿಂದ ತೆಗೆಯಬಾರದು.
ಅವೈಜ್ಞಾನಿಕವಾಗಿ ಇವರ ಕಾರ್ಯನಿರ್ವಹಣಾ ಮೌಲ್ಯಮಾಪನವನ್ನು ಕೈಬಿಡಬೇಕು. ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು. ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡುಗಂಟು ನೀಡಬೇಕು. ನಗರ ಆಶಾಗಳಿಗೆ 2 ಸಾವಿರ ರೂ. ಗೌರವಧನ ಹೆಚ್ಚಿಸಬೇಕು. ಕೇಂದ್ರ ಹೆಚ್ಚಿಸಿದ ಪ್ರೋತ್ಸಾಹ ಧನವನ್ನು ರಾಜ್ಯದಲ್ಲೂ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷೆ ಜಿ.ಎಸ್.ಯಶೋದರ್ ಸೀಮಾ, ಆಶಾ ಸಂಘದ ಅಧ್ಯಕ್ಷೆ ಭಾಗ್ಯಾ, ಕಾರ್ಯದರ್ಶಿ ಮಂಜುಳಾ, ತಿ.ನರಸೀಪುರ ತಾಲೂಕು ಕಾರ್ಯದರ್ಶಿ ಪವಿತ್ರಾ, ನಂಜನಗೂಡಿನ ಅಧ್ಯಕ್ಷೆ ರೇಣುಕಾ, ಮೈಸೂರು ತಾಲೂಕಾಧ್ಯಕ್ಷೆ ಮಂಗಳಮ್ಮ, ಹುಣಸೂರು ತಾಲೂಕಾಧ್ಯಕ್ಷೆ ಶಾಂತಮ್ಮ, ಕೆ.ಆರ್.ನಗರ ಅಧ್ಯಕ್ಷೆ ಕೋಮಲಾ, ಎಚ್.ಡಿ.ಕೋಟೆಯ ಕಾರ್ಯದರ್ಶಿ ಸುಧಾ, ಮೈಸೂರು ನಗರ ಅಧ್ಯಕ್ಷೆ ಕೋಮಲಾ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.