ಜಿಲ್ಲೆ

ಮಾಸಿಕ 12 ಸಾವಿರ ರೂ. ನಿಗದಿಪಡಿಸಿ

ಶಿವಮೊಗ್ಗ: ರಾಜ್ಯದಿಂದ ಗೌರವಧನ ಮತ್ತು ಕೇಂದ್ರದಿಂದ ಪ್ರೋತ್ಸಾಹ ಧನ ಸೇರಿಸಿ ಮಾಸಿಕ ಕನಿಷ್ಠ 12 ಸಾವಿರ ರೂ. ನಿಗದಿಪಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ 42 ಸಾವಿರ ಆಶಾ ಕಾರ್ಯಕರ್ತೆಯರಿದ್ದು ಬೇಡಿಕೆಗಳನ್ನು ಈಡೇರಿಸುವಂತೆ ಹಲವು ದಿನಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೂ ಸರ್ಕಾರ ಮನವಿಗೆ ಸ್ಪಂದಿಸಿಲ್ಲ. ಹೀಗಾಗಿ ಹೋರಾಟ ಮುಂದುವರಿಸುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಕರೊನಾ ವಿರುದ್ಧ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರ ರಕ್ಷಣೆಗೆ ಎಲ್ಲ ಸುರಕ್ಷಣಾ ಪರಿಕರಗಳನ್ನು ನೀಡಬೇಕು. ಯಾವುದೇ ಕಾರಣಕ್ಕೂ ವೇತನ ವಿಳಂಬ ಮಾಡಬಾರದು ಎಂದು ಒತ್ತಾಯಿಸಿದರು.

ನಮ್ಮ ಕೆಲಸಕ್ಕೆ ತಕ್ಕಂತೆ ವೇತನ ಸಿಗುತ್ತಿಲ್ಲ. ಕೆಲಸ ಹೆಚ್ಚಾಗಿದೆಯೇ ಹೊರತು ಹಣ ಮಾತ್ರ ಕೈಗೆ ಬರುತ್ತಿಲ್ಲ. ನಮ್ಮ ಕುಟುಂಬಗಳು ತೀವ್ರ ಆರ್ಥಿಕ ತೊಂದರೆಗೆ ಒಳಗಾಗಿವೆ. ನಮಗೆ ಗೌರವಕೊಟ್ಟರೆ ಸಾಲದು. ಕೆಲಸಕ್ಕೆ ತಕ್ಕಂತೆ ಸಂಬಳ ಸಿಗಬೇಕು. ಹಲವೆಡೆ ನಮ್ಮ ಮೇಲೆ ದೈಹಿಕ ಹಲ್ಲೆಗಳು ನಡೆದಿವೆ. ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿದ್ದೇವೆ. ನಮ್ಮ ಕಷ್ಟಗಳನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಜು.29ರಿಂದ ರಾಜ್ಯವ್ಯಾಪಿ ಹೋರಾಟ ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.

ಪದಾಧಿಕಾರಿಗಳಾದ ಶೀಲಾಬಾಯಿ, ಮಮತಾ, ಪವಿತ್ರಾ, ನಂದಿನಿ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.