ಜಿಲ್ಲೆ

ಮಾಸಿಕ 10 ಸಾವಿರ ರೂ. ಗೌರವಧನಕ್ಕೆ ಆಗ್ರಹ

ಚಿತ್ರದುರ್ಗ: ಮುಂಬರುವ ಏಪ್ರಿಲ್‌ನಿಂದಲೇ ರಾಜ್ಯದೆಲ್ಲ ಆಶಾ ಕಾರ್ಯಕರ್ತೆಯರಿಗೂ ಮಾಸಿಕ ಕನಿಷ್ಠ 10ಸಾವಿರ ರೂ. ಗೌರವಧನ ನೀಡುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮಿತಿ ಕಾರ್ಯಕರ್ತೆಯರು ಬುಧವಾರ ಪ್ರತಿಭಟನೆ ನಡೆಸಿದರು.

ನ್ಯಾಯಯುತ ಬೇಡಿಕೆ ಈಡೇರಿಸಬೇಕು. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಪತ್ರ ರವಾನಿಸಿದರು.

ಹೆಚ್ಚುವರಿ ಕೆಲಸದ ಆಧಾರದ ಮೇಲೆ ಪ್ರೋತ್ಸಾಹಧನ ಕೂಡ ಏರಿಕೆ ಮಾಡಬೇಕು. ಒಂದು ವೇಳೆ ಯಾರಿಗಾದರೂ ಕಡಿಮೆ ಬಂದಿದ್ದಲ್ಲಿ, ಅಂತಹ ಆಶಾ ಕಾರ್ಯಕರ್ತೆಯರಿಗೆ ಸರ್ಕಾರವೇ ವ್ಯತ್ಯಾಸದ ಹಣ ಪಾವತಿಸಬೇಕು ಎಂದು ಆಗ್ರಹಿಸಿದರು.

ಬಜೆಟ್‌ನಲ್ಲಿ ರಾಜ್ಯದ 2.5 ಲಕ್ಷ ಅಂಗನವಾಡಿ-ಬಿಸಿಯೂಟ ಕಾರ್ಯಕರ್ತೆಯರಿಗೆ 1ಸಾವಿರ ರೂ. ಹೆಚ್ಚಿಸಿದಂತೆ, 42ಸಾವಿರ ಆಶಾ ಕಾರ್ಯಕರ್ತೆಯರಿಗೂ ನೀಡಲು ಸರ್ಕಾರ ಆದೇಶಿಸಬೇಕು ಎಂದು ಒತ್ತಾಯಿಸಿದರು.

ಆರೋಗ್ಯ ಸಚಿವರ ಸಮ್ಮುಖದಲ್ಲಿ ಇಲಾಖೆ ಅಧಿಕಾರಿಗಳು, ಸಂಘದ ಪದಾಧಿಕಾರಿಗಳ ಸಭೆ ನಡೆಸಿ, ಎಲ್ಲ ಸಮಸ್ಯೆಗಳಿಗೂ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಕೋರಿದರು.

ಎಐಯುಟಿಯುಸಿ ರವಿಕುಮಾರ್, ಗುರುಶಾಂತಾ, ನಾಗವೇಣಮ್ಮ, ಮಂಜುಳಾ, ಕಾವೇರಿ, ಬೋರಮ್ಮ, ಮಾದೇವಿ, ಮಮತಾ ಚಿತ್ರಹಳ್ಳಿ, ಸುನಿತಾ ಹೊಸದುರ್ಗ ಇತರರಿದ್ದರು.