ಬೆಂಗಳೂರು ಗ್ರಾಮಾಂತರ: ಕರೊನಾ ಸಂಕಷ್ಟದ ಬಳಿಕ ನೆಲಕಚ್ಚಿರುವ ತೋಟಗಾರಿಕೆ ಬೆಳೆಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಜಿಲ್ಲಾ ತೋಟಗಾರಿಗೆ ಇಲಾಖೆ ಜಿಲ್ಲೆಯಲ್ಲಿ ಮೇ 27ರಿಂದ 3 ದಿನ ಆಯೋಜಿಸಿದ್ದ ಮಾವು ಹಾಗೂ ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ 16 ಲಕ್ಷ ರೂ.ವಹಿವಾಟು ನಡೆದಿದೆ.
ಇದು ಜಿಲ್ಲೆಯಲ್ಲಿ ಎರಡನೇ ಬಾರಿ ಆಯೋಜನೆಗೊಂಡ ಮೇಳವಾಗಿದೆ. ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಮಾವು ಹಾಗೂ ಹಲಸು ಮೇಳ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ.
ದೇವನಹಳ್ಳಿಯ ನಂದಿಉಪಚಾರ್ ಹೋಟೆಲ್ ಮುಂಭಾಗ ರಾಣಿ ಸರ್ಕಲ್ ಬಳಿ ಮೇಳ ಆಯೋಜಿಸಲಾಗಿತ್ತು. 17 ಸ್ಟಾಲ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯ ನಾಲ್ಕೂ ತಾಲೂಕುಗಳ ರೈತರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಭಾಗದ ರೈತರು ಹಾಗೂ ಗ್ರಾಹಕರೂ ಮೇಳದಲ್ಲಿ ಪಾಲ್ಗೊಂಡಿದ್ದರು. ಈ ಹಿಂದೆಯೂ ಇದೇ ಸ್ಥಳದಲ್ಲಿ ಆಯೋಜಿಸಿದ್ದು ಯಶಸ್ವಿಯಾಗಿತ್ತು. ಮಾವು ಹಾಗೂ ಹಲಸಿಗೆ ಪ್ರತ್ಯೇಕ ಸ್ಟಾಲ್‌ಗಳ ಸೌಲಭ್ಯ ಕಲ್ಪಿಸಲಾಗಿತ್ತು. 16,406 ಕೆಜಿ ಮಾವು ಹಾಗೂ ನೂರಾರು ಹಲಸು ಬಿಕರಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
7,586 ಹೆಕ್ಟೇರ್ ಮಾವು: ಜಿಲ್ಲೆಯಲ್ಲಿ 7,586 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಾಗುತ್ತಿದ್ದು, ಪ್ರಮುಖವಾಗಿ ತೋತಾಪುರಿ, ಮಲ್ಲಿಕಾ, ರಸಪುರಿ, ಸೇಂದೂರ ತಳಿಗಳ ಹಣ್ಣಿಗೆ ಬೇಡಿಕೆ ಕಂಡುಬಂದಿತ್ತು. ವಾರ್ಷಿಕವಾಗಿ 22ರಿಂದ 25 ಸಾವಿರ ಮೆಟ್ರಿಕ್ ಟನ್ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಅದೇ ರೀತಿ 69.52 ಹೆಕ್ಟೇರ್ ಪ್ರದೇಶದಲ್ಲಿ ಹಲಸು ಬೆಳೆಯಲಾಗುತ್ತಿದ್ದು, 2100 ರಿಂದ 2242 ಮೆಟ್ರಿಕ್ ಟನ್ ಉತ್ಪಾದನೆಯಾಗಲಿದೆ. ಈ ಎರಡೂ ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಯಾಗಿದೆ.
ತೂಬಗೆರೆ ಹಲಸಿಗೆ ಬೇಡಿಕೆ: ಜಿಲ್ಲೆಯಲ್ಲದೆ ರಾಜ್ಯದ ಎಲ್ಲ ಕಡೆಯಿಂದಲೂ ಬಹಳ ಬೇಡಿಕೆ ಇರುವ ತೂಬಗೆರೆ ಹಲಸು ಈ ಬಾರಿಯ ಹಲಸಿನ ಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು, ಹಲಸು ಋತುಮಾನ ಆಧಾರಿತ ಬೆಳೆಯಾಗಿದ್ದು, ಪ್ರಸ್ತುತ ಹಂಗಾಮಿನಲ್ಲಿ ಎರಡೂ ಬೆಳೆಗಳು ಕಟಾವಿಗೆ ಬಂದಿರುವ ಹಿನ್ನೆಲೆಯಲ್ಲಿ ಉತ್ತಮ ವಹಿವಾಟಿಗೆ ಮೇಳ ವೇದಿಕೆ ಕಲ್ಪಿಸಿತ್ತು.
ಸಸ್ಯಸಂತೆಯಿಂದ ಸಸಿಗಳಿಗೆ ಆರ್ಡರ್: ಮೇಳದಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಸಸ್ಯಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲಾಖೆಯ ಪ್ರಮುಖ ತೋಟಗಾರಿಕೆ ಸಸಿಗಳು ಬಿಕರಿಯಾಗಿವೆ. ಅಲ್ಲದೆ ನೂರಾರು ರೈತರಿಂದ ಮತ್ತಷ್ಟು ಸಸಿಗಳಿಗೆ ಬೇಡಿಕೆ ಬಂದಿದ್ದು, ರೈತರು ಮೇಳದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3 ದಿನ ಆಯೋಜಿಸಿದ್ದ ಮಾವು ಹಾಗೂ ಹಲಸಿನ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. 16 ಲಕ್ಷ ರೂ.ನಷ್ಟು ವಹಿವಾಟು ನಡೆದಿದ್ದು, ರೈತರು ಸಂತಸಗೊಂಡಿದ್ದಾರೆ, ಗುಣಮಟ್ಟದ ಹಣ್ಣುಗಳನ್ನು ಖರೀದಿಸಿದ ಗ್ರಾಹಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಇಲಾಖೆಯ ಸಸಿಗಳಿಗೆ ಬೇಡಿಕೆ ಬಂದಿದ್ದು ರೈತರಿಗೆ ಶೀಘ್ರವೇ ವಿತರಿಸಲಾಗುವುದು. ಗುಣವಂತ, ಉಪನಿರ್ದೇಶಕ ತೋಟಗಾರಿಕೆ ಇಲಾಖೆ