ಜಿಲ್ಲೆ

ಮಾವು ಬೆಳೆ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ

ಮೈಸೂರು: ಸುತ್ತೂರಿನ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಮಾವು ಬೆಳೆಯಲ್ಲಿ ಅನುಸರಿಸಬೇಕಾದ ವೈಜ್ಞಾನಿಕ ಬೇಸಾಯ ಕ್ರಮಗಳು ಹಾಗೂ ಸಮಗ್ರ ಕೀಟ, ರೋಗಗಳ ನಿರ್ವಹಣೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.
ಮಾವಿನ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೇಂದ್ರದ ಮುಖ್ಯಸ್ಥೆ ಎಚ್.ದಿವ್ಯಾ, ಕೃಷಿ ವಿಜ್ಞಾನ ಕೇಂದ್ರದ ಚಟುವಟಿಕೆ, ಕೇಂದ್ರದ ಕಾರ್ಯಕ್ರಮಗಳು ಹಾಗೂ ಮಾವು ಬೆಳೆ ನಿರ್ವಹಣೆ ಕುರಿತು ವಿವರಿಸಿದರು.
ಸಂಪನ್ಮೂಲ ವ್ಯಕ್ತಿ ಜೆ.ಜಿ.ರಾಜಣ್ಣ ಮಾತನಾಡಿ, ಕೃಷಿಯಲ್ಲಿ ಮಣ್ಣಿನ ಆರೋಗ್ಯದ ಪ್ರಾಮುಖ್ಯತೆಯನ್ನು ತಿಳಿಸಿಕೊಡುವುದರ ಜತೆಗೆ ಮಾವು ಬೆಳೆಯಲ್ಲಿ ಕಂಡುಬರುವ ಪೋಷಕಾಂಶಗಳ ಕೊರತೆ, ಅವುಗಳ ನಿರ್ವಹಣೆ ಹಾಗೂ ಮಾವಿನ ಉಪಯೋಗಗನ್ನು ತಿಳಿಸಿಕೊಟ್ಟರು.
ತೋಟಗಾರಿಕೆ ವಿಜ್ಞಾನಿ ಡಾ.ಜಿ.ಎಂ.ವಿನಯ್, ಮಾವು ಬೆಳೆಯಲ್ಲಿ ತಳಿಗಳ ಆಯ್ಕೆ, ಹವಾಗುಣ, ಕೂಯ್ಲು ಮತ್ತು ಕೂಯ್ಲೋತ್ತರ ತಂತ್ರಜ್ಞಾನ, ಮಾವಿನಲ್ಲಿ ಬರುವ ಜೈವಿಕ ಮತ್ತು ಅಜೈವಿಕ ಸಮಸ್ಯೆ, ಮಾವಿನ ಬೆಳೆಯಲ್ಲಿ ಆಕಾರ ನಿರ್ವಹಣೆ ಮತ್ತು ಚಾಟನಿಯ ಪ್ರಾಮುಖ್ಯತೆ ವಿವರಿಸಿದರು.
ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ.ವೈ.ಪಿ.ಪ್ರಸಾದ್ ಮಾವು ಬೆಳೆಯಲ್ಲಿ ತಗಲುವ ಕೀಟ ಮತ್ತು ರೋಗಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ತರಬೇತಿ ಕೊನೆಯಲ್ಲಿ ರೈತರಿಗೆ ಮಾವಿನ ಮರಗಳ ಆಕಾರ ನಿರ್ವಹಣೆ ಮತ್ತು ಚಾಟನಿ ಮಾಡುವುದನ್ನು ಪದ್ಧತಿ ಪ್ರಾತ್ಯಕ್ಷತೆ ಆಯೋಜಿಸಲಾಗಿತ್ತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ದಿವಾಕರ್, ಪ್ರಗತಿಪರ ರೈತ ಅರುಣ್ ಜೌಗಿದಾರ್, ಕೆವಿಕೆಯ ವಿಜ್ಞಾನಿಗಳಾದ ಡಾ.ಶಾಮರಾಜ್, ಡಾ.ರಕ್ಷಿತ್‌ರಾಜ್, ಕ್ಷೇತ್ರ ವ್ಯವಸ್ಥಾಪಕರಾದ ಗಂಗಪ್ಪ ಹಿಪ್ಪರಗಿ, ಕುಮಾರಸ್ವಾಮಿ ಇತರರು ಇದ್ದರು.