ಧಾರವಾಡ: ನಗರದ ನವಲೂರಿನ ಪಠಾಣ ಗಲ್ಲಿಯ ಯುವಕ (ಪಿ-673 ಕರೊನಾ ಸೋಂಕಿತ) ವೃತ್ತಿಯಲ್ಲಿ ಲಾರಿ ಚಾಲಕ. ಈತ ಕೆಲ ದಿನಗಳ ಹಿಂದೆ ಮುಂಬೈ ಸೇರಿ ಮಹಾರಾಷ್ಟ್ರದ ವಿವಿಧ ಸ್ಥಳಗಳಿಗೆ ಮಾವು ಮಾರಾಟಕ್ಕಾಗಿ ತೆರಳಿದ್ದ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಕರೊನಾ ಹಾವಳಿ ಹೆಚ್ಚಿದ್ದರೂ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಅಲ್ಲಿ ಮಾವು ಇಳಿಸಿ, ಕರೊನಾ ತಂದಿದ್ದಾನೆ ಎಂದು ರ್ತಸಲಾಗಿದೆ.
26 ವರ್ಷದ ಯುವಕನೊಂದಿಗೆ ಅಂದಾಜು 25 ಜನ ಸಂಪರ್ಕಕ್ಕೆ ಬಂದಿದ್ದು, ಅವರೆಲ್ಲರನ್ನೂ ಸರ್ಕಾರಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಜತೆಗೆ ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಸಹ ಒಳಪಡಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರವೇ 25 ಜನರ ಸಂಪರ್ಕ ಹೊಂದಿದ್ದ ಎಂಬುದು ತಿಳಿದಿದೆ. ಆದರೆ, ಸಂಪೂರ್ಣ ಟ್ರಾವೆಲ್ ಹಿಸ್ಟರಿ ಸಿಕ್ಕ ಬಳಿಕವೇ ವಿವರವಾದ ಮಾಹಿತಿ ಲಭ್ಯವಾಗಲಿದೆ. ಪರೀಕ್ಷೆಗೆ ಒಳಪಟ್ಟ ಎಲ್ಲರ ವರದಿ ಬರುವವರೆಗೂ ಜಿಲ್ಲೆಗೆ ಆತಂಕ ತಪ್ಪಿದ್ದಲ್ಲ.
ಕೃಷಿ-ತೋಟಗಾರಿಕೆ ಉತ್ಪನ್ನಗಳ ಸಾಗಾಟಕ್ಕೆ ಸರ್ಕಾರ ಅನುಮತಿ ನೀಡಿದೆ. ಧಾರವಾಡ ಜಿಲ್ಲೆಯಲ್ಲಿ ಬೆಳೆಯುವ ಆಪೂಸು ಮಾವಿಗೆ ಮಹಾರಾಷ್ಟ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ. ಪ್ರತಿವರ್ಷವೂ ಸಾವಿರಾರು ಟನ್ ಮಾವು ಇಲ್ಲಿಂದ ಸರಬರಾಜಾಗುತ್ತದೆ. ನವಲೂರಿನ ಯುವಕನಲ್ಲಿ ಸೋಂಕು ಪತ್ತೆಯಾಗಿರುವುದು, ಇದೇ ರೀತಿ ಮಹಾರಾಷ್ಟ್ರಕ್ಕೆ ಹೋಗಿ ಬಂದಿರುವ ಇತರರು ಜಿಲ್ಲೆಯಲ್ಲಿದ್ದಾರೆಯೆ ಎಂದು ಶೋಧಿಸುವ ಅನಿವಾರ್ಯತೆಯನ್ನು ಎತ್ತಿ ತೋರಿಸಿದೆ.
ಧಾರವಾಡದಲ್ಲಿ ಎರಡನೇ ವ್ಯಕ್ತಿ: ನಗರದ ಹೊಸಯಲ್ಲಾಪುರ ಬಡಾವಣೆ ವ್ಯಕ್ತಿಗೆ ಮಾರ್ಚ್ ಮೂರನೇ ವಾರದಲ್ಲಿ ಸೋಂಕು ದೃಢಪಡುವ ಮೂಲಕ ಧಾರವಾಡ ಜಿಲ್ಲೆಗೆ ಕರೊನಾ ಪ್ರವೇಶಿಸಿತ್ತು. ಇದರಿಂದ ಆತನ ಮನೆ ಇರುವ ಪ್ರದೇಶವನ್ನು ಕಂಟೇನ್ಮೆಂಟ್ ಮಾಡಲಾಗಿತ್ತು. ಸಹಜವಾಗಿ ಧಾರವಾಡದ ಜನ ಆತಂಕಕ್ಕೀಡಾಗಿದ್ದರು. ಹೊಸಯಲ್ಲಾಪುರದ ಯುವಕ ಗುಣಮುಖನಾಗಿದ್ದಾನೆ. ನಂತರ ಧಾರವಾಡ ನಗರದಲ್ಲಿ ಒಂದೂ ಪ್ರಕರಣ ವರದಿಯಾಗಿರಲಿಲ್ಲ. ಇದರಿಂದ ಜನರು ನಿರಾಳರಾಗಿದ್ದರು.
ಜಿಲ್ಲೆಯಲ್ಲಿ ಒಂದೇ ಕುಟುಂಬದಿಂದ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಹಾಟ್ಸ್ಪಾಟ್ ಎಂದು ಘೊಷಿಸಲಾಗಿತ್ತು. ಆದರೆ, ಹೆಚ್ಚಿನ ಜನರು ಅಲ್ಪ ಕಾಲದಲ್ಲೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆ ಜಿಲ್ಲೆಯನ್ನು ಕಿತ್ತಳೆ ವಲಯ ಎಂದು ಸರ್ಕಾರ ಘೊಷಣೆ ಮಾಡಿತ್ತು.
ಧಾರವಾಡದಲ್ಲಿ ಲಾಕ್ಡೌನ್ ಸಡಿಲಿಸಿ ವ್ಯಾಪಾರ ವಹಿವಾಟಿಗೆ ಸರ್ಕಾರ ಅನುವು ಮಾಡಿಕೊಟ್ಟಿದೆ. ಇದರಿಂದ ಜನತೆ ನಿರಾಳರಾಗಿದ್ದರು. ಈಗ ಮತ್ತೊಂದು ಕರೊನಾ ಪ್ರಕರಣ ವರದಿಯಾಗಿದ್ದರಿಂದ ನಾಗರಿಕರು ಬೆಚ್ಚಿಬಿದ್ದಿದ್ದಾರೆ.
ಜಿಲ್ಲೆಯಲ್ಲಿ ಸಾಕಷ್ಟು ಬಿಗಿ ಬಂದೋಬಸ್ತ್ ಕೈಗೊಂಡಿದ್ದರೂ ಹಲವರು ಮಾತ್ರ ತಮಗೆ ಕರೊನಾ ಬರುವುದಿಲ್ಲ ಎಂದು ತಿಳಿದುಕೊಂಡು ಸುಖಾಸುಮ್ಮನೆ ಓಡಾಟ ನಡೆಸಿದ್ದರು. ಇದರ ಬೆನ್ನಲ್ಲೇ ಸರ್ಕಾರ ತಕ್ಕಮಟ್ಟಿಗೆ ಲಾಕ್ಡೌನ್ ಸಡಿಲಿಕೆ ಮಾಡಿದ್ದೇ ತಡ, ಲಾಕ್ಡೌನ್ ತೆರವು ಮಾಡಿದ್ದಾರೆ ಎನ್ನುವಂತೆ ಓಡಾಟ ನಡೆಸಿದ್ದಾರೆ.
ಈವರೆಗೆ ಧಾರವಾಡ ಒಂದು ರೀತಿಯಲ್ಲಿ ಸುರಕ್ಷಿತವಾಗಿದೆ ಎಂದೇ ಹೇಳಲಾಗಿತ್ತು. ಆದರೆ, ಇದೀಗ ಬೆಳಕಿಗೆ ಬಂದಿರುವ ಪ್ರಕರಣ ಇನ್ನೂ ಹೆಚ್ಚಿನ ಜನರಿಗೆ ವಕ್ಕರಿಸುವ ಅನುಮಾನ ಉಂಟುಮಾಡಿದೆ. ಹೀಗಾಗಿ ಲಾಕ್ಡೌನ್ಅನ್ನು ಇನ್ನಷ್ಟು ಬಿಗಿಗೊಳಿಸುವ ಸಾಧ್ಯತೆಯೂ ಇದೆ.
ಜಿಲ್ಲೆಯ 11ನೇ ಪ್ರಕರಣ: ಕರೊನಾ ಸೋಂಕು ತಗುಲಿದ ವ್ಯಕ್ತಿ ಕೆಮ್ಮು, ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದ. ಮುಂಬೈ ಮತ್ತು ಮಹಾರಾಷ್ಟ್ರದ ವಿವಿಧ ಸ್ಥಳಗಳಿಗೆ ಪ್ರಯಾಣ ಬೆಳೆಸಿದ್ದ ಈತನನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮಂಗಳವಾರ ಪಾಸಿಟಿವ್ ಎಂದು ವರದಿ ಬಂದಿರುವುದಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಇದು ಧಾರವಾಡ ನಗರದ 2ನೇ ಹಾಗೂ ಜಿಲ್ಲೆಯ 11ನೇ ಪ್ರಕರಣವಾಗಿದೆ. ಈಗಾಗಲೇ 6 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನವಲೂರಿನ ಯುವಕ ಸೇರಿ ಐವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.