ಹಾಸನ: ನನ್ನ ಆರೋಗ್ಯ ಗುಣಮುಖವಾದರೆ ನಿನ್ನ ಸಮ್ಮುಖದಲ್ಲಿ 1001 ಕಳಸ, ಪೂಜಾ ಕೈಂಕರ್ಯ ಮಾಡುವುದಾಗಿ ಹರಕೆ ಕಟ್ಟಿಕೊಂಡಿದ್ದೆ. ದೇವರ ದಯೆಯಿಂದ ಆರೋಗ್ಯ ಸುಧಾರಿಸಿದೆ. ಹೀಗಾಗಿ ಹರಕೆ ತೀರಿಸಿದ್ದೇನೆ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರು ಹೇಳಿದರು.
ಹೊಳೆನರಸೀಪುರ ತಾಲೂಕಿನ, ಮಾವಿನಕೆರೆ ಬೆಟ್ಟದಲ್ಲಿನ ರಂಗನಾಥ ಸ್ವಾಮಿ ದೇವಾಲಯದಲ್ಲಿ ಶನಿವಾರ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಶುಕ್ರವಾರ ಸಂಜೆ ಆರು ಗಂಟೆಯಿಂದ ರಂಗನಾಥನ ಸನ್ನಿಧಿಯಲ್ಲಿ ವಿಧಿವತ್ತಾಗಿ, ಶಾಸ್ತ್ರೋಕ್ತವಾಗಿ, ಪೂಜಾ ಕಾರ್ಯಕ್ರಮಗಳನ್ನು ಮಾಡತ್ತಿದ್ದೇವೆ. ತುಂಬಾ ಜನ ಪುರೋಹಿತರಿದ್ದಾರೆ. ಕೆಲವರು ಹೊರಗಿನಿಂದ ಬಂದಿದ್ದಾರೆ. ಭಾನುವಾರ ನಾಲ್ಕು ಗಂಟೆಗೆ ಪೂಜಾ ಕಾರ್ಯಕ್ರಮ ಮುಗಿಯಬಹುದು ಎಂದರು.
ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ಯಾರೂ ಇದರಲ್ಲಿ ರಾಜಕೀಯ ಬೆರಸಬಾರದು. ನಾನು, ನನ್ನ ಶ್ರೀಮತಿ ಹಾಗೂ ಭವಾನಿ ರೇವಣ್ಣ ಅವರು ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಪೂಜಾ ಕೈಂಕರ್ಯದ ವ್ಯವಸ್ಥೆಯನ್ನು ನಾನು ಮತ್ತು ರೇವಣ್ಣ ಸೇರಿ ಮಾಡಿದರೆ ಅಪಾರ್ಥ ಕಲ್ಪಿಸುತ್ತಾರೆ ಎಂಬ ಕಾರಣಕ್ಕಾಗಿ ನನ್ನ ಮಿತ್ರರಿಗೆ ಹೇಳಿದ್ದೆ. ಅವರೇ ಖುದ್ದು ನಿಂತು ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಬಂದವರಿಗೆ ಎಲ್ಲರಿಗೂ ಸಮರ್ಪಕವಾಗಿ ಪ್ರಸಾದ ವಿತರಿಸಿದ್ದಾರೆ. ನಾವು ದೇವರನ್ನು ನಂಬಿದ್ದೇವೆ. ನಮ್ಮ ತಂದೆ ಇಲ್ಲಿ ಹಳೆಯ ದಾರಿಯಲ್ಲಿ ನನ್ನನ್ನು ಕರೆದುಕೊಂಡು ಬರುತ್ತಿದ್ದರು ಎಂದು ನೆನಪು ಮೆಲುಕು ಹಾಕಿದರು.
ನನ್ನ ಆರೋಗ್ಯದ ಪ್ರಶ್ನೆಗೆ ಬಂದರೆ ಎರಡು ವರ್ಷಗಳಿಂದ ಭಗವಂತನ ಅನುಗ್ರಹದಿಂದ ಬದುಕಿದ್ದೇನೆ. ನನ್ನ ಅಳಿಯ ಡಾ.ಸಿ.ಎನ್. ಮಂಜುನಾಥ್, ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥರಾದ ಸುದರ್ಶನ್ ಬಲ್ಲಾಳ್ ಮತ್ತು ಅವರ ತಂಡ ಎರಡು ವರ್ಷದಿಂದ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ನಾನು ದೇವರಿಗೆ ತುಂಬಾ ಆಭಾರಿಯಾಗಿದ್ದೇನೆ. ನನಗೆ ಕಿಡ್ನಿಯಲ್ಲಿ ಸಮಸ್ಯೆ ಕಾಣಿಸಿಕೊಂಡು ತೊಂದರೆ ಆಯ್ತು, ಈಗ ಎಲ್ಲಾ ಸರಿ ಹೋಗಿದೆ. ನಾನು ಆರೋಗ್ಯವಾಗಿರಲು ವೈದ್ಯರ ಪ್ರಾಮಾಣಿಕ ಪ್ರಯತ್ನ, ಭಗವಂತನ ಅನುಗ್ರಹ ಕಾರಣ ಎಂದರು.
ನನಗೆ ಎಂಟು ವರ್ಷವಿದ್ದಾಗ ಅಂದರೆ ಸುಮಾರು 80 ವರ್ಷದ ಹಿಂದೆ ಈ ಪೂಜೆ ನಡೆದಿತ್ತು. ನನಗೆ ವಯಸ್ಸಿನ ಕಾರಣದಿಂದ ಮಂಡಿ ನೋವಿದೆ. ಆದರೆ ಜ್ಞಾಪಕಶಕ್ತಿ ಚೆನ್ನಾಗಿದೆ. ಯಾವ ಇಸವಿಯಲ್ಲಿ ಪೂಜೆ ನಡೆದಿತ್ತು ಎಂಬುದನ್ನು ನೆನಪಿಸಿಕೊಂಡು ಹೇಳುತ್ತೇನೆ. ಭಾನುವಾರದ ಪೂಜೆಗೆ ಬಹಳ ಜನ ಭಕ್ತಾಧಿಗಳು ಬರುತ್ತಾರೆ. ನಾವು ಯಾರಿಗೂ ಹೇಳಿಲ್ಲ. ಭಾನುವಾರ ಅಂತಿಮವಾಗಿ ಕಳಸ ಪ್ರತಿಷ್ಠಾಪನೆ ಮಾಡುತ್ತಾರೆ. ಆದರೆ ನಾನು ಮೇಲೆ ಹತ್ತಿ ಕಳಸಕ್ಕೆ ಪೂಜೆ ಮಾಡಲು ಆಗಲ್ಲ ಎಂದರು.
ಬೆಟ್ಟದ ರಂಗನಾಥನ ಆಶೀರ್ವಾದದಿಂದ ರಾಜಕೀಯದಲ್ಲಿ ಬೆಳೆದಿದ್ದೇನೆ. ಕಾಂಗ್ರೆಸ್‌ನಿಂದ ಟಿಕೆಟ್ ತಪ್ಪಿತ್ತು. ನಾನು ಆಗ ಹತ್ತು ರೂಪಾಯಿ ಬಾಡಿಗೆಯ ಮನೆಯಲ್ಲಿ ಇದ್ದೆ. ಐದು ಗಂಟೆ ಬ್ರಾಹ್ಮಿ ಮುಹೂರ್ತದಲ್ಲಿ ದೇವರ ದರ್ಶನ ಆಯ್ತು. ಆ ರಂಗನಾಥ ಇದ್ದಾನೆ ಚುನಾವಣೆಗೆ ನಿಂತುಕೊಳ್ಳಿ ಎಂದು ನನ್ನ ಪತ್ನಿ ಹೇಳಿದರು. ಆಗ ಜನರೇ ದುಡ್ಡ ಹಾಕಿ ಚುನಾವಣೆ ಮಾಡಿದರು. ಹೀಗೆ ಮೊದಲ ಚುನಾವಣೆ ಗೆದ್ದೆ. ನಂತರ ಪ್ರಧಾನಮಂತ್ರಿಯೂ ಆದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಬೆಂಗಳೂರಿನ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಪೂರ್ಣ ವಿವರ ನನ್ನ ಮುಂದೆ ಇಲ್ಲ. ಅದರ ಬಗ್ಗೆ ಗೊತ್ತಿಲ್ಲ. ನನ್ನ ಮಗ ಹರದನಹಳ್ಳಿಯಲ್ಲಿ ಟಿವಿ ಹಾಕ್ಸಿಲ್ಲ, ಪೇಪರ್ ಕೂಡ ನೋಡಿಲ್ಲ. ನಾನು, ನನ್ನ ಮನಸ್ಸು ರಂಗನಾಥಸ್ವಾಮಿ ಅಷ್ಟೇ, ಹಾಗೆಂದ ಮಾತ್ರಕ್ಕೆ ರಾಜಕೀಯದಿಂದ ದೂರ ಹೋಗಲ್ಲ ಎಂದು ಹೇಳಿದರು.