ಗದಗ: ನಗರದ ಎಪಿಎಂಸಿಯಲ್ಲಿ ಶುಕ್ರವಾರ ಜನರು ಮುಖಕ್ಕೆ ಮಾಸ್ಕ್ ಧರಿಸಿದೆ, ದೈಹಿಕ ಅಂತರ ಕಾಪಾಡಿಕೊಳ್ಳದೆ ಮಾವಿನ ಹಣ್ಣು ಖರೀದಿಯಲ್ಲಿ ತೊಡಗಿದ್ದು ಕಂಡುಬಂದಿತು. ಜನರು ಗುಂಪಾಗಿ ನಿಂತು ಹಣ್ಣು ಖರೀದಿ ಮಾಡಿದರು. ಮಹಿಳೆಯರು, ಮಕ್ಕಳು ಸಹ ಸಾಕಷ್ಟು ಸಂಖ್ಯೆಯಲ್ಲಿ ಮಾವು ಖರೀದಿಗಾಗಿ ಬಂದಿದ್ದರು. ಗ್ರಾಹಕರು ಮತ್ತು ವ್ಯಾಪಾರಸ್ಥರ ಮಧ್ಯೆ ಸುರಕ್ಷಿತ ಅಂತರ ಇರಲಿಲ್ಲ. ಕೆಲವರು ಮಾಸ್ಕ್ ಧರಿಸಿರಲಿಲ್ಲ. ಈ ಕುರಿತು ಎಚ್ಚರಿಕೆ ನೀಡಲು ಎಪಿಎಂಸಿ ಅಧಿಕಾರಿಗಳೂ ಇರಲಿಲ್ಲ. ಹೀಗಾಗಿ ವರ್ತಕರು, ಗ್ರಾಹಕರು ತಮ್ಮಿಷ್ಟದಂತೆ ವ್ಯಾಪಾರದಲ್ಲಿ ತೊಡಗಿದ್ದರು.
ಜಿಲ್ಲೆಯಲ್ಲಿ 20 ಕರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾದರೂ ಜನರು ಬುದ್ಧಿ ಕಲಿಯುತ್ತಿಲ್ಲ. ವೈಯಕ್ತಿಕ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿಲ್ಲ. ಈ ಕುರಿತು ಸಾಕಷ್ಟು ಬಾರಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ ಎಂದು ಪೊಲೀಸರು ಬೇಸರ ವ್ಯಕ್ತಪಡಿಸಿದರು.