ಶ್ರೀನಿವಾಸಪುರ: ಮುಂಗಾರು ಮಳೆ ಪ್ರಾರಂಭಗೊಂಡು ಒಂದು ತಿಂಗಳು ಕಳೆದಿದ್ದು ಶೇಂಗ ಬೀಜಕ್ಕೆ ಕಾಲಾವಕಾಶ ಮುಗಿದಿದ್ದು, ರಾಗಿ ಸೇರಿ ತೊಗರಿ, ಅಲಸಂದೆ ಮುಂತಾದ ದಾನ್ಯಗಳ ಬಿತ್ತನೆಗೆ ಕಾಲಾವಕಾಶ ಇರುವುದರಿಂದ ರೈತರು ಮಾವಿನ ಸುಗ್ಗಿ ಮುಗಿಸಿ ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ.
2 ತಿಂಗಳಿಂದ ಮಾವಿನ ಸುಗ್ಗಿಯಲ್ಲಿದ್ದ ರೈತರು ದಾನ್ಯಗಳ ಬಿತ್ತನೆಗೆ ಭೂಮಿ ಹದಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಟ್ರ್ಯಾಕ್ಟರ್‌ಗಳು ಮಾವಿನ ಕಾಯಿ ಸಾಗಿಸುವ ಕಾರ್ಯದಲ್ಲಿ ತೊಡಗಿದ್ದರಿಂದ ಟ್ರ್ಯಾಕ್ಟರ್ ಇಲ್ಲದೆ ಇರುವವರು ಬಾಡಿಗೆಗೆ ಟ್ರ್ಯಾಕ್ಟರ್ ಸಿಗದೆ ಭೂಮಿ ಉಳುಮೆಗೆ ಕಾಯಬೇಕಾಗಿತ್ತು. ಈಗ ಮಾವಿನ ವಹಿವಾಟು ಮುಗಿದಿರುವುದರಿಂದ ಭೂಮಿ ಹದ ಮಾಡಿಕೊಳ್ಳಲು ರೈತರು ಮುಂದಾಗಿದ್ದು, ಟ್ರ್ಯಾಕ್ಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಭೂಮಿ ತೇವವಾಗಿದ್ದು, ಭೂಮಿ ಹದ ಮಾಡಿಕೊಳ್ಳಲು ಉತ್ತಮ ಸಮಯವಾಗಿದೆ. ರಾಯಲ್ಪಾಡು ಮತ್ತು ನೆಲವಂಕಿ ಹೋಬಳಿಗಳಲ್ಲಿ ಮಾತ್ರ ಶೇಂಗಾ ಬಿತ್ತನೆ ಮಾಡುವುದು ವಾಡಿಕೆ ಇದ್ದು, ಈಗಾಗಲೆ ಶೇಂಗಾ ಬೀಜ ಬಿತ್ತನೆ ಕಾರ್ಯ ಈ ಎರಡು ಹೋಬಳಿಗಳಲ್ಲಿ ಮುಗಿದಿದೆ. ರೋಣೂರು, ಯಲ್ದೂರು ಮತ್ತು ಕಸಬಾ ಹೋಬಳಿಗಳಲ್ಲಿ ರಾಗಿ, ಅಲಸಂದೆ, ತೊಗರಿ, ಅವರೆ ಬೀಜ ಹೆಚ್ಚಾಗಿ ಬಿತ್ತನೆ ಮಾಡುತ್ತಾರೆ. ಈ ಹೋಬಳಿಗಳಲ್ಲಿ ಮಾವಿನ ತೋಟ ಹೆಚ್ಚಾಗಿದ್ದು, ಮಾವಿನ ಸುಗ್ಗಿ ಮುಗಿದ ನಂತರ ರಾಗಿ, ತೊಗರಿ, ಅವರೆಯನ್ನು ಹೆಚ್ಚಾಗಿ ಬಿತ್ತನೆ ಮಾಡುತ್ತಾರೆ.
ಅವರೆಕಾಯಿ ಬೀಜ ನಾಟಿ: ಮಾವಿನ ತೋಟಗಳಲ್ಲಿ ಹಾಗೂ ಕೆರೆಯಂಗಳದ ಭೂಮಿ ಮತ್ತು ಖಾನೆ ಅಂಗಳದ ಭೂಮಿಗಳಲ್ಲಿ ಅವರೆ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಅವರೆ ಸುಗ್ಗಿಯಲ್ಲಿ ಶ್ರೀನಿವಾಸಪುರದಲ್ಲಿ ಅವರೆ ಕಾಯಿ ವ್ಯಾಪಾರ ವ್ಯಾಪಕವಾಗಿ ನಡೆಯುತ್ತಿದೆ. ಇದು ಜಿಲ್ಲೆಗೆ ಪ್ರಥಮವಾಗಿದ್ದು, ಮಾವಿನ ಕಾಯಿ ಸುಗ್ಗಿಯಾದ ನಂತರ ಅವರೆಕಾಯಿ ಬೀಜ ನಾಟಿ ಮಾಡಲು ರೈತರು ಮುಂದಗಿದ್ದಾರೆ.
ತಾಲೂಕಿನಲ್ಲಿ ಜೂನ್ ಅಂತ್ಯಕ್ಕೆ 388 ಮಿ.ಮೀ ಮಳೆಯಾಗಿದೆ. ಇದುವರೆಗೆ ತಾಲೂಕಿನಲ್ಲಿ 183 ಹೆಕ್ಟೇರ್ ರಾಗಿ ಮತ್ತು 93 ಹೆಕ್ಟೇರ್ ನೆಲಗಡಲೆ, 126 ಹೆಕ್ಟೇರ್ ತೊಗರಿ 14 ಹೆಕ್ಟೇರ್ ಅಲಸಂದಿ ಬಿತ್ತನೆಯಾಗಿದೆ. ರಾಗಿ ಶೇ.10 ಮತ್ತು ನೆಲಗಡಲೆ ಶೇ.30 ಬಿತ್ತನೆಯಾಗಿದೆ. ರಾಗಿ 7,764, ಶೇಂಗಾ 3,102 ಹೆಕ್ಟೇರ್ ಬಿತ್ತನೆಯಾಗಬೇಕಿದೆ. ನೆಲಗಡೆಲೆ ಹೊರತುಪಡಿಸಿ ಉಳಿದ ಬಿತ್ತನೆ ಬೀಜ ಇಲಾಖೆಯಲ್ಲಿ ಲಭ್ಯವಿವೆ. ಈಶ್ವರ್, ತಾಂತ್ರಿಕ ಅಧಿಕಾರಿ ಕೃಷಿ ಇಲಾಖೆ, ಶ್ರೀನಿವಾಸಪುರ