ಬಾಗಲಕೋಟೆ: ಯಾವಾಗಲು ಮಾವಿನಗಿಡಕ್ಕೆ ಹೆಚ್ಚಿನ ಕಲ್ಲು ಬೀಳುತ್ತವೆ ಹೊರತು ಜಾಲಿಗಿಡಕ್ಕೆ ಅಲ್ಲ. ಹೀಗಾಗಿಯೇ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಕೊಡುತ್ತಾರೆ ಎನ್ನುವ ಪರಿಕಲ್ಪನೆಯಿಂದ ಸ್ವಾಮೀಜಿ ಹೋರಾಟ ಮಾಡುತ್ತಿದ್ದಾರೆ ಎಂದು ಬಾಗಲಕೋಟೆ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಬಾಗಲಕೋಟೆಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪಂಚಮಸಾಲಿಗಳ ಬೇಡಿಕೆಗೆ ಸರ್ಕಾರ ಸಹಾನುಭೂತಿಯಿಂದ ವರ್ತಿಸುತ್ತಿದೆ. ಮೀಸಲಾತಿ ಕೊಡಲು ನಮ್ಮ ಸಿಎಂ ಪ್ರಮಾಣಿಕ ಮನಸ್ಥಿತಿಯಲ್ಲಿ ಇದ್ದರೆ. ಅದಕ್ಕೆ ಸಂವಿಧಾನಾತ್ಮಕವಾಗಿ ಕಾನೂನಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಕೂಡಲಸಂಗಮ ಪಂಚಮಸಾಲಿ ಸ್ವಾಮೀಜಿ ಡಿಸೆಂಬರ್ ಗಡುವು ನೀಡಿದ್ದರ ಬಗ್ಗೆ ಉತ್ತರಿಸಿದ ಸಚಿವರು, ಸ್ವಾಮೀಜಿ ಸಮಾವೇಶ ಮಾಡಲಿ. ಅದು ಅವರ ಹಕ್ಕು. ಮೀಸಲಾತಿ ಸಿಗಬಹುದು ಎನ್ನುವ ವಿಶ್ವಾಸದಲ್ಲಿ ನಾವು ಇದ್ದೇವೆ. ಆದರೆ, ಅದು ಇವತ್ತೆ ಬೇಕು, ನಾಳೆಯೇ ಬೇಕು ಎನ್ನುವುದು ಸಮಂಜಲವಲ್ಲ ಎಂದು ಹೇಳಿದರು.
ಇನ್ನು ಬೆಳಗಾವಿಯಲ್ಲಿ ಎಂಇಎಸ್ ನವರು ಬದುಕಲು, ಅಸ್ತಿತ್ವ ಉಳಿಸಿಕೊಳ್ಳಲು ಇಂತಹ ಕೆಲಸ ಮಾಡುತ್ತಿರುತ್ತಾರೆ. ಇದಕ್ಕೆ ಹಿಂದೆಯೂ ಸೊಪ್ಪು ಹಾಕಿಲ್ಲ, ಈಗಲೂ ಹಾಕಲ್ಲ, ಮುಂದೆಯೂ ಹಾಕಲ್ಲ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇದಕ್ಕೆ ಎಂಇಎಸ್ ನವರು ಏನೂ ಮಾಡಲು ಆಗಲ್ಲ. ಅವರ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಕನ್ನಡದ ನೆಲ, ಜಲ, ಭಾಷೆ ಸಂರಕ್ಷಣೆ ವಿಚಾರದಲ್ಲಿ ನಮ್ಮ ಎಲ್ಲ ರಾಜಕೀಯ ಪಕ್ಷಗಳು ಬದ್ದವಾಗಿವೆ. ಅದರಲ್ಲೂ ನಮ್ಮ ಪಕ್ಷ ನಾಡು, ನುಡಿ, ಜಲಕ್ಕೆ ಆದ್ಯತೆ ಕೊಡುತ್ತದೆ ಎಂದು ತಿಳಿಸಿದರು.
ಇನ್ನು ಇದೇ ತಿಂಗಳು ೯ ರಂದು ತ್ರೈಮಾಸಿಕ ಕೆಡಿಪಿ ಸಭೆ ತೆಗೆದುಕೊಳ್ಳುತ್ತೇನೆ. ಅಂದು ಸಂಜೆ ವರೆಗೆ ವಿವಿಧ ವಿಷಯಗಳನ್ನು ಚರ್ಚೆ ನಡೆಸಲಾಗುವುದು ಎಂದು ಘೋಷಿಸಿದರು. ಬೆನ್ನಲ್ಲೆ ೯ಕ್ಕೆ ಬೇಡ, ೮ ಅಥವಾ ೧೦ಕ್ಕೆ ಮಾಡುತ್ತೇನೆ ಎಂದರು.
ಇದಕ್ಕೆ ಮುಖ್ಯ ಕಾರಣ ನ. ೯ ರಂದು ಚಂದ್ರಗ್ರಹಣ ಇದೆ ಎಂದು ಪಕ್ಕದಲ್ಲಿ ಇದ್ದ ಶಾಸಕ ವೀರಣ್ಣ ಚರಂತಿಮಠ ಹೇಳಿದ್ದರಿಂದ, ಸಚಿವರು ಗ್ರಹಣ ಇದೆಯಾ? ದಿನಾಂಕ ಬದಲಾಯಿಸಿದರು. ಬಳಿಕ ಯಾವ ಗ್ರಹಣ ಇದ್ದರೂ ನಮಗೆ ಏನೂ ಆಗಲ್ಲ. ಗ್ರಹಣ ಬೇರೆಯವರಿಗೆ ಹಿಡಿದಿದೆ, ನಮಗಲ್ಲ ಎಂದು ನಗುತ್ತಲೇ ಕೆಡಿಪಿ ದಿನಾಂಕ ಚೇಂಜ್ ಮಾಡಿದರು.
ಚಾಲುಕ್ಯ ಉತ್ಸವಕ್ಕೆ ಹಿಡಿದ ಗ್ರಹಣ ಬಿಡುತ್ತಾ…?
ಇನ್ನು ಬಿಜೆಪಿ ಸರ್ಕಾರ ಬಂದ ಮೇಲೆ ನಿಂತು ಹೋಗಿರುವ ಜಿಲ್ಲೆಯ ಚಾಲುಕ್ಯ ಉತ್ಸವ ಹಾಗೂ ರನ್ನ ಉತ್ಸವ ನಡೆಸುವ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಜೊತೆ ಚರ್ಚೆ ಮಾಡಿ. ಈ ವರ್ಷ ಯಾವುದೇ ಕಾರಣ ಹೇಳದೇ ಜಿಲ್ಲೆಯ ಎರಡೂ ಉತ್ಸವಗಳನ್ನು ನಡೆಸುವುದಾಗಿ ಸಚಿವರು ಅಭಯ ನೀಡಿದರು.
ಕೂಡಲಸಂಗಮ ಅನುದಾನದ ಬಗ್ಗೆ ಮಾಹಿತಿ ಸಂಗ್ರಹಿಸಿ :
ಅಕ್ಷರಧಾಮ ಮಾದರಿಯಲ್ಲಿ ಕೂಡಲಸಂಗಮ ಅಭಿವೃದ್ದಿ ಪಡಿಸಲು ಹಿಂದಿನ ಸರ್ಕಾರದಲ್ಲಿ ಬಿಡುಗಡೆ ಆಗಿದ್ದ ೧೩೬ ಕೋಟಿ ರೂ. ಅನುದಾನ ಸದ್ಬಳಿಕೆ ಆಗುತ್ತಿಲ್ಲ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಈ ತಿಂಗಳು ನಡೆಯುವ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದ ಸಚಿವರು, ಈ ಬಗ್ಗೆ ಎಲ್ಲ ಮಾಹಿತಿ ಪಡೆದುಕೊಂಡು ಸಭೆಯಲ್ಲಿ ತಿಳಿಸಲು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರಿಗೆ ಸೂಚಿಸಿದರು.
ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಡಿಸಿ ಪಿ.ಸುನೀಲಕುಮಾರ, ಸಿಇಒ ಟಿ.ಭೂಬಾಲನ್, ಎಸ್ಪಿ ಜಯಪ್ರಕಾಶï ಇದ್ದರು.