ಎನ್. ವೆಂಕಟೇಶ್ ಚಿಕ್ಕಬಳ್ಳಾಪುರ
ಫಸಲು ಮಾರಾಟದ ಸಂದರ್ಭದಲ್ಲಿ ಮಾವಿಗೆ ಊಜಿ ನೊಣ ಸಮಸ್ಯೆ ಕಾಡಲಾರಂಭಿಸಿದೆ. ಇದರಿಂದಾಗಿ ಬೆಳೆಗಾರರು ಆದಾಯ ಖೋತಾ ಆಗುವ ಆತಂಕಕ್ಕೆ ಒಳಗಾಗಿದ್ದಾರೆ.
ಇತ್ತೀಚೆಗೆ ಸುರಿದ ಬಿರುಗಾಳಿಸಹಿತ ಆಲಿಕಲ್ಲು ಮಳೆಗೆ ಅಲ್ಲಲ್ಲಿ ಮಾವು ಬೆಳೆ ಹಾಳಾಗಿದೆ. ಇದೀಗ ಹವಾಮಾನ ಏರುಪೇರಿನಿಂದಾಗಿ ಮರದಲ್ಲೇ ಬಲಿತಿರುವ ಮಾವಿನಲ್ಲಿ ನೊಣ (ಊಜಿ) ಬಾಧೆ ಹೆಚ್ಚಾಗುತ್ತಿದೆ. ಇದರಿಂದ ನಷ್ಟ ಅನುಭವಿಸುವಂತಾಗಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲೆಯ ಆರು ತಾಲೂಕಿನಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಪ್ರಸಕ್ತ ವರ್ಷ ಹವಾಮಾನದಲ್ಲಿನ ಬದಲಾವಣೆಯಿಂದ ಶೇ.60 ಪ್ರಮಾಣದಲ್ಲಿ ಮಾವು ಇಳುವರಿ ಕುಸಿದಿದೆ. ಅಳಿದುಳಿದ ಬೆಳೆಯನ್ನು ರಸಿಕೊಳ್ಳಲು ಕೀಟ ಬಾಧೆ ಅಡ್ಡಿಯಾಗಿದೆ. ಇದು ಹಣ್ಣುಗಳ ರಾಜ ಮಾರುಕಟ್ಟೆಗೆ ಲಗ್ಗೆ ಇಡುವ ಸಮಯ. ಭರಪೂರ ಆದಾಯ ತಂದು ಕೊಡಬೇಕಾದ ಸಂದರ್ಭದಲ್ಲೇ ಕೀಟ ಸಮಸ್ಯೆ ಕಾಣಿಸಿಕೊಂಡಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ಶೇ.25 ಇಳುವರಿ ನಷ್ಟ ಭೀತಿ: ಊಜಿ ನೊಣದ ಬಾಧೆಯಿಂದ ಸರಾಸರಿ ಶೇ.25 ಮಾವು ಇಳುವರಿ ನಷ್ಟವಾಗುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಉಳಿದಿರುವ ಬೆಳೆಯ ಗುಣಮಟ್ಟ ಕುಸಿತದಿಂದ ಮಾರುಕಟ್ಟೆಯಲ್ಲಿ ನಿರೀತ ಬೆಲೆ ಸಿಗುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.
ಮೋಹಕ ಬಲೆ ಪರಿಣಾಮಕಾರಿ: ಊಜಿ ನೊಣದ ಹತೋಟಿಗೆ ರೈತರು ಮೋಹಕ ಬಲೆ ತಂತ್ರ ಬಳಸಬೇಕು ಎಂದು ತೋಟಗಾರಿಕೆ ಇಲಾಖೆ ಸಲಹೆ ನೀಡಿದೆ. ಒಂದು ಲೀಟರ್ ಸಾಮರ್ಥ್ಯದ ಖಾಲಿ ಪ್ಲಾಸ್ಟಿಕ್ ಬಾಟಲಿಯ ಸ್ವಲ್ಪ ಕೆಳ ಭಾಗದಲ್ಲಿ 2 ರಂಧ್ರ ಕೊರೆಯಬೇಕು. ಬಾಟಲಿಯ ಒಳಗೆ ಒಂದು ಮರದ ತುಂಡು ಕಟ್ಟಬೇಕು. ಆ ಮರದ ತುಂಡಿನ ಮೇಲೆ 1 ಮಿಲೀ ಮೀಥೈಲ್ ಯೂಜಿನಾಲ್ ಮತ್ತು 1 ಮೀಲಿ ಡೈಕ್ಲೋರಾವಾಸ್ ಔಷಧ ಲೇಪಿಸಬೇಕು. ಬಾಟಲಿಯ ಮುಚ್ಚಳ ಹಾಕಿದ ನಂತರ, ಅದನ್ನು ಆಳೆತ್ತರದಲ್ಲಿ ಮಾವಿನ ಮರದ ಕೊಂಬೆಗೆ ಕಟ್ಟಬೇಕು. ಔಷಧ ವಾಸನೆಯಿಂದ ಆಕಷಿರ್ತವಾದ ಊಜಿ ನೊಣಗಳಲ್ಲಿ ಶೇ.90 ನೊಣಗಳು ಬಾಟಲಿ ಪ್ರವೇಶಿಸಿ ಸಾಯುತ್ತವೆ ಎಂದು ವಿವರಿಸಿದೆ. ಮಾರುಕಟ್ಟೆಯಲ್ಲಿ ಸಿದ್ಧ ಮೋಹಕ ಬಲೆಗಳು ಸಿಗುತ್ತವೆ. ಒಂದು ಎಕರೆ ಮಾವಿನ ತೋಟಕ್ಕೆ 5ರಿಂದ 6 ಕಡೆ ಮೋಹಕ ಬಲೆ ಕಟ್ಟಬೇಕು. ಇನ್ನು ಪ್ರಾರಂಭದಲ್ಲಿಯೇ ನೊಣದ ಹತೋಟಿಗೆ ಕ್ರಮ ಕೈಗೊಳ್ಳದಿದ್ದರೆ ಇಳುವರಿ ಹಾಳಾಗುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಸಹಜವಾಗಿ ಗುಣಮಟ್ಟ ಮಾವಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತದೆ. ಇದಕ್ಕೆ ಮಾವು ಬೆಳೆಯನ್ನು ಬಾಧಿಸುವ ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮೋಹಕ ಬಲೆ ಬಳಸಬೇಕು. ರಮಾದೇವಿ, ಚಿಂತಾಮಣಿ ಮಾವು ಅಭಿವೃದ್ಧಿ ಕೇಂದ್ರದ ಅಧಿಕಾರಿ ಮಾವು ಕೊಯ್ಲು ಮಾಡುವಾಗ ಬಲಿತ ಮಾವಿನಲ್ಲಿ ವಿಪರೀತ ಊಜಿ ನೊಣ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ತೋಟಗಾರಿಕಾ ಇಲಾಖೆ ಮಾರ್ಗದರ್ಶನದಂತೆ ಪರಿಹಾರ ಕ್ರಮ ಕೈಗೊಳ್ಳಲಾಗುತ್ತಿದೆ. ಯಗವಕೋಟೆ ಶ್ರೀನಿವಾಸ್, ಮಾವು ಬೆಳೆಗಾರ ರೈತರಿಗೆ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಊಜಿ ನೊಣ ಬಾಧೆ ನಿಯಂತ್ರಣದ ಮೋಹಕ ಬಲೆ ನೀಡಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಮಾವಿನ ಗುಣಮಟ್ಟ ಕಾಯ್ದುಕೊಳ್ಳಬೇಕು. ಎನ್. ರಮೇಶ್, ಶಿಡ್ಲಟ್ಟ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ