ಜಿಲ್ಲೆ

ಮಾಲ್ಡೀವ್ಸ್‌ಗೆ ಹೊರಟ ಹಾಸನ ಹಾಲು

ಹಾಸನ: ಹಾಸನ ಹಾಲು ಒಕ್ಕೂಟದಿಂದ ಮಾಲ್ಡೀವ್ಸ್ ದೇಶಕ್ಕೆ ನಿತ್ಯ 50,000 ಲೀಟರ್ ಯುಎಚ್‌ಟಿ (ಅಲ್ಟ್ರಾ ಹೀಟ್ ಟ್ರೀಟ್‌ಮೆಂಟ್) ಮತ್ತು ಸುವಾಸಿತ ಹಾಲು ರಫ್ತು ವಹಿವಾಟಿಗೆ ಒಕ್ಕೂಟದ ಅಧ್ಯಕ್ಷ ಎಚ್.ಡಿ. ರೇವಣ್ಣ ಸೋಮವಾರ ಹಾಸನ ಹಾಲು ಒಕ್ಕೂಟದ ಎದುರು ಹಾಲಿನ ಟ್ರಕ್‌ಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.


ನಂತರ ಸುದ್ದಿಗೋಷ್ಠಿ ನಡೆಸಿದ ಎಚ್.ಡಿ. ರೇವಣ್ಣ, ಯುಎಚ್‌ಟಿ ಹಾಲನ್ನು ಏಷ್ಯಾ ಖಂಡದ ವಿವಿಧ ದೇಶಗಳಿಗೆ ರಫ್ತು ಮಾಡುವ ಸಂಬಂಧ ಕರ್ನಾಟಕ ಹಾಲು ಮಂಡಳಿಯೊಂದಿಗೆ ಮಾತುಕತೆ ನಡೆಯುತ್ತಿದೆ. ಇದರ ಅಂಗವಾಗಿ ಈ ದಿನ ಮಾಲ್ಡೀವ್ಸ್ ದೇಶಕ್ಕೆ ಯುಎಚ್‌ಟಿ ಮತ್ತು ಸುವಾಸಿತ ಹಾಲನ್ನು ರಫ್ತು ಮಾಡುತ್ತಿದ್ದು, ಮೊದಲನೇ ವಾಹನಕ್ಕೆ ಇಂದು ಹಸಿರು ನಿಶಾನೆ ತೋರಲಾಗಿದೆ. ಸೌದಿ ಅರೇಬಿಯಾ ಮತ್ತಿತರ ಅರಬ್ ದೇಶಗಳಿಂದಲೂ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಬಂದಿದ್ದು, ಈ ಸಂಬಂಧ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು.

ಒಂದು ಲೀಟರ್ ಪೆಟ್ ಬಾಟಲ್ ಹಾಲು ಮಾರುಕಟ್ಟೆಗೆ:
ಒಕ್ಕೂಟದಲ್ಲಿ ಸ್ಥಾಪಿಸಿರುವ ಪೆಟ್ ಬಾಟಲ್ ಘಟಕದಲ್ಲಿ ವಿವಿಧ 9 ಮಾದರಿಯ ಸುವಾಸಿತ ಹಾಲನ್ನು ಉತ್ಪಾದನೆ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದರ ಜೊತೆಗೆ ಇಂದಿನಿಂದ 1 ಲೀಟರ್ ಪೆಟ್ ಬಾಟಲ್‌ನಲ್ಲಿ ಯುಎಚ್‌ಟಿ ಮತ್ತು ಸಂಸ್ಕರಿತ ಹಾಲನ್ನು ಮಾರುಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೆ 200 ಎಂಎಲ್ ಪೆಟ್ ಬಾಟಲಿಗಳಲ್ಲಿ ಗಿಡಮೂಲಿಕೆ ಮತ್ತು ಮಸಾಲೆಯುಕ್ತ (ಹರ್ಬಲ್ ಸ್ಪೈಸ್ಡ್) ಹಾಲು ಉತ್ಪಾದನೆ ಮಾಡಲಾಗುತ್ತಿದೆ. ಈ ಹರ್ಬಲ್ ಸ್ಪೈಸ್ಡ್ ಹಾಲು ಅಶ್ವಗಂಧ, ತುಳಸಿ, ಶುಂಠಿ, ಲವಂಗ, ಮೆಣಸು ಮತ್ತು ಅರಿಶಿನ ಒಳಗೊಂಡಿದ್ದು, ಆರೋಗ್ಯದಾಯಕವಾಗಿದೆ ಎಂದು ವಿವರ ನೀಡಿದರು.

230 ಕೋಟಿ ರೂ. ಲಾಭ ನಿರೀಕ್ಷೆ:
ಪ್ರಸ್ತುತ ಬೇಸಿಗೆ ಕಾಲ ಸಮೀಪಿಸುತ್ತಿರುವುದರಿಂದ ಹಾಗೂ ಪಶು ಆಹಾರ ದರ ಮತ್ತು ರಾಸುಗಳ ನಿರ್ವಹಣೆ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಒಕ್ಕೂಟವು ಅಕ್ಟೋಬರ್-2022ರ ಅಂತ್ಯವರೆಗೆ ಸುಮಾರು 150 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ಮಾರ್ಚ್ 2023 ರ ಅಂತ್ಯಕ್ಕೆ ಅಂದಾಜು 220 ರಿಂದ 230 ಕೋಟಿ ರೂ.ಗಳ ಕ್ರೂಢೀಕೃತ ಆದಾಯ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.


ರೈತರಿಗೆ ರಾಸುಗಳ ನಿರ್ವಹಣಾ ವೆಚ್ಚಗಳನ್ನು ಭರಿಸಲು ಅನುಕೂಲವಾಗುವಂತೆ ಪ್ರಸ್ತುತ ಹಾಲು ಉತ್ಪಾದಕರಿಗೆ ಶೇ.4 ಜಿಡ್ಡು ಮತ್ತು ಶೇ 8.5 ಎಸ್‌ಎನ್‌ಎಫ್ ಹಾಲಿಗೆ ಲೀಟರ್‌ಗೆ 2.50 ರೂ. ಹೆಚ್ಚಿಸಿದ್ದು, ಒಕ್ಕೂಟದಿಂದ ರೈತರಿಗೆ ಪ್ರತಿ ಲೀಟರ್‌ಗೆ 32.50 ರೂ. ನಿಗದಿಪಡಿಸಲಾಗಿದೆ. ಹೆಚ್ಚಿಸಿರುವ ಖರೀದಿ ದರ ಹೆಚ್ಚಳದಿಂದ ಮಾಹೆಯಾನ ಸುಮಾರು 8 ಕೋಟಿ ರೂ.ಗಳಂತೆ ಮಾರ್ಚ್2023 ರ ಅಂತ್ಯಕ್ಕೆ ಸುಮಾರು 24 ಕೋಟಿ ರೂ. ಒಕ್ಕೂಟಕ್ಕೆ ಹೆಚ್ಚುವರಿ ವೆಚ್ಚವಾಗಲಿದೆ. ಇದರಿಂದ ಲಾಭದ ಮೊತ್ತವನ್ನು ಹಾಲು ಉತ್ಪಾದಕರಿಗೆ ಪಾವತಿಸಿದಂತಾಗುತ್ತದೆ ಎಂದರು.

ಹೊಸದಾಗಿ 110 ಸಂಘಗಳ ಸ್ಥಾಪನೆ:
ಒಕ್ಕೂಟದಲ್ಲಿ ನಿರ್ಮಾಣ ಮಾಡುತ್ತಿರುವ ಮೆಗಾ ಡೇರಿ, ಹಾಲಿನ ಪುಡಿ ಘಟಕ ಮತ್ತಿತರ ಉತ್ಪನ್ನಗಳಿಗೆ ಹೆಚ್ಚಿನ ಪ್ರಮಾಣದ ಹಾಲಿನ ಅವಶ್ಯಕತೆ ಇರುವದರಿಂದ ಹಾಲು ಉತ್ಪಾದನೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೊಸದಾಗಿ 110 ಸಂಘಗಳನ್ನು ಈ ಮಾಸಾಂತ್ಯದ ವೇಳೆಗೆ ಒಂದೇ ಬಾರಿ ಸ್ಥಾಪನೆ ಮಾಡಲಾಗುವುದು. ಹೈನುಗಾರಿಕೆ ಅಭಿವೃದ್ಧಿ ಉದ್ದೇಶದಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡು ಸುಮಾರು 100 ಕೋಟಿ ರೂ. ಸಾಲವನ್ನು ರಾಸುಗಳ ಖರೀದಿಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಒಂದು ರಾಸಿಗೆ 50,000 ರೂ. ನಂತೆ ತಲಾ ಒಬ್ಬ ಸದಸ್ಯರಿಗೆ ಎರಡು ರಾಸು ಖರೀದಿಸಲು ಸಾಲ ನೀಡಲಾಗುವುದು. ಹಾಲಿನ ಬಿಲ್‌ನಲ್ಲಿ ಸಾಲದ ಕಂತಿನ ಮೊತ್ತ ಕಡಿತ ಮಾಡುವ ಮೂಲಕ ಸಾಲ ಮರುಪಾವತಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಚರ್ಮಗಂಟು ರೋಗ ನಿಯಂತ್ರಣದಲ್ಲಿ:
ರಾಸುಗಳಿಗೆ ಮಾರಣಾಂತಿಕವಾಗಿರುವ ಚರ್ಮಗಂಟು ರೋಗ ತಡೆಯಲು ಮುಂಜಾಗ್ರತಾ ಕ್ರಮವಾಗಿ ಹಾಸನ ಹಾಲು ಒಕ್ಕೂಟ ಸುಮಾರು 3 ಲಕ್ಷ ಲಸಿಕೆಗಳನ್ನು ಖರೀದಿಸಿದೆ. ಒಕ್ಕೂಟ ಮತ್ತು ಪಶುವೈದ್ಯ ಇಲಾಖೆ ಸಿಬ್ಬಂದಿ ಮೂಲಕ ಲಸಿಕಾ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಇದರಿಂದಾಗಿ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಚರ್ಮಗಂಟು ರೋಗ ನಿಯಂತದಲ್ಲಿದೆ ಎಂದರು.


ರಾಸುಗಳ ಮರಣದಿಂದ ರೈತರಿಗೆ ಆಗುವ ನಷ್ಟ ತಪ್ಪಿಸಲು ಹೊಸದಾಗಿ ಖರೀದಿಸುವ ಹಾಗೂ ಹಾಲಿ ಇರುವ ರಾಸುಗಳನ್ನು ಕಡ್ಡಾಯವಾಗಿ ವಿಮೆಗೆ ಒಳಪಡಿಸಲಾಗಿದೆ. ವಿಮೆ ಕಂತಿನ ಮೊತ್ತ 995 ರೂ.ಗಳಾಗಿದ್ದು, ಇದರಲ್ಲಿ ಶೇ. 60 ರಷ್ಟನ್ನು ಒಕ್ಕೂಟದಿಂದ ಭರಿಸಲಾಗುತ್ತಿದೆ. 2021-22 ನೇ ಸಾಲಿನಲ್ಲಿ 26085 ರಾಸುಗಳನ್ನು ವಿಮೆಗೆ ಒಳಪಡಿಸಿದ್ದು, ವಿಮಾ ಕಂಪನಿಗೆ 2.01 ಕೋಟಿ ರೂ. ಪಾವತಿಸಲಾಗಿದೆ. 430 ರಾಸುಗಳು ಮರಣ ಹೊಂದಿದ್ದು, 1.72 ಕೋಟಿ ರೂ. ವಿಮಾ ಪರಿಹಾರ ನೀಡಲಾಗಿದೆ. 2022-23 ನೇ ಸಾಲಿನಲ್ಲಿ 20,487 ರಾಸುಗಳನ್ನು ವಿಮೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿವಿಧ ಹಾಲು ಒಕ್ಕೂಟಗಳು ಉತ್ಪಾದಕರಿಗೆ ಕೊಡುತ್ತಿರುವ ದರಕ್ಕಿಂತ ಹೆಚ್ಚಿನ ದರವನ್ನು ಹಾಸನ ಹಾಲು ಒಕ್ಕೂಟ ನೀಡುತ್ತಿದೆ. ಪ್ರತಿ ಲೀಟರ್ ಹಾಲಿಗೆ 37.50 ರೂ. ಉತ್ಪಾದಕರಿಗೆ ದೊರೆಯುತ್ತಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಮತ್ತು ನಿರ್ದೇಶಕರು ಉಪಸ್ಥಿತರಿದ್ದರು.