ದೊಡ್ಡಬಳ್ಳಾಪುರ: ಬಾಡಿಗೆ ಮನೆಯಲ್ಲಿದ್ದವಳೇ ಮನೆ ಮಾಲೀಕನ ಮನೆಗೆ ಕನ್ನ ಹಾಕಿ ಚಿನ್ನಾಭರಣ, ನಗದು ದೋಚಿರುವ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಮಮತಾ (25) ಬಂಧಿತೆ. ಈಕೆಯಿಂದ ಚಿನ್ನಾಭರಣ ವಶಕ್ಕೆ ಪಡೆದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ಸಾಧಿಕ್ ಪಾಷಾ ಅವರು ಮಾಲೀಕರನ್ನು ಠಾಣೆಗೆ ಕರೆಸಿ ಚಿನ್ನಾಭರಣ ಹಸ್ತಾಂತರ ಮಾಡಿದ್ದಾರೆ.
ತಾಲೂಕಿನ ಪಾಲನಜೋಗಿಹಳ್ಳಿಯ ಮುನಿಸ್ವಾಮಯ್ಯ (75) ಎಂಬುವವರ ಮನೆಯಲ್ಲಿ ಚಿನ್ನಾಭರಣ ಕಳವಾಗಿತ್ತು. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಮುನಿಸ್ವಾಮಯ್ಯ ವಾಸವಿದ್ದ ಮನೆ ಪಕ್ಕದಲ್ಲಿದ್ದ ಇನ್ನೊಂದು ಮನೆಯನ್ನು ಬಾಡಿಗೆಗೆ ನೀಡಿದ್ದರು. ಮಮತಾ ಹಾಗೂ ಆಕೆಯ ಗಂಡ ಒಂದು ತಿಂಗಳಿಂದ ವಾಸವಿದ್ದರು. ಮುನಿಸ್ವಾಮಯ್ಯ ಹೊರಗಡೆ ಹೋದರೆ ಮನೆಗೆ ಬೀಗ ಹಾಕಿ, ಬೀಗದ ಕೀಯನ್ನು ಕಿಟಿಕಿಯಲ್ಲಿಟ್ಟು ಹೋಗುತ್ತಿದ್ದರು. ಇದನ್ನು ಗಮನಿಸಿದ್ದ ಮಮತಾ, ಅದನ್ನೇ ಬಂಡವಾಳ ಮಾಡಿಕೊಂಡು ಚಿನ್ನಾಭರಣ ಕಳವು ಮಾಡಿದ್ದಳು. ಮಮತಾ ಮೂಲತಃ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರದವಳು, ಹೊಸಕೋಟೆಯ ಸೂಲಿಬೆಲೆ ಮೂಲದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು, ಬಳಿಕ ದೊಡ್ಡಬಳ್ಳಾಪುರದ ಪಾಲನಜೋಗಿಹಳ್ಳಿಗೆ ಬಂದು ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. 15 ದಿನದ ಹಿಂದೆ ಮಮತಾಳ ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದಾಗ, ಕದ್ದಿದ್ದು ನಾನಲ್ಲ, ನನ್ನ ಗಂಡ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಳು. ಆದರೆ ಪೊಲೀಸರು ಇವಳ ಮಾತು ನಂಬದೆ ಬ್ಯಾಂಕ್ ಸ್ಟೇಟ್ ಮೆಂಟ್ ಪರಿಶೀಲಿಸಿದಾಗ ಅಸಲಿ ಸತ್ಯ ಬಯಲಾಗಿದೆ.
ಪೊಲೀಸರು ಪ್ರಕರಣ ಭೇದಿಸಿದ್ದು ಹೇಗೆ....?
ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು, ಅಕ್ಕಪಕ್ಕದ ಮನೆ ಹಾಗೂ ಬಾಡಿಗೆಗೆ ಬಂದಿದ್ದವರನ್ನು ವಿಚಾರಣೆ ಮಾಡಿ ಇತರ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಅನುಮಾನದ ಮೇರೆಗೆ ವೃದ್ಧನ ಮನೆ ಪಕ್ಕದಲ್ಲಿ ಬಾಡಿಗೆಗೆ ಇದ್ದ ಮಮತಾಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದಾಗ ಕೃತ್ಯ ಹೊರಬಿದ್ದಿದೆ.
ಬಿರುವಿನಲ್ಲಿದ್ದ ಚಿನ್ನಾಭರಣಕ್ಕೆ ಕನ್ನ
ವೃದ್ಧ ವಾಸವಾಗಿದ್ದ ಮನೆಯಲ್ಲಿದ್ದ 2 ಬೀರುವಿನಲ್ಲಿ 37 ಗ್ರಾಂ ತೂಕದ ಒಂದು ಚಿನ್ನದ ಚೈನ್, 16 ಗ್ರಾಂ ತೂಕದ ಒಂದು ಬ್ರಾಸ್ ಲೈಟ್, 11 ಗ್ರಾಂ ತೂಕದ ಒಂದು ಬಳೆ, 11 ಗ್ರಾಂ ತೂಕದ ಎರಡು ಚಿನ್ನದ ಉಂಗುರ, 6.7 ಗ್ರಾಂ ತೂಕದ ಒಂದು ಜತೆ ಓಲೆ ಮತ್ತು ಮೂಗು ನತ್ತು, 9.8 ಗ್ರಾಂ ತೂಕದ ಒಂದು ಚೈನು ಹಾಗೂ ಒಂದು ಸಾವಿರ ನಗದು ಸೇರಿ ಸುಮಾರು 9 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ 91.5 ಗ್ರಾಂ ಚಿನ್ನದ ಒಡವೆಗಳನ್ನು ಕದಿದ್ದಳು. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಮುನಿಸ್ವಾಮಯ್ಯ ದೂರು ದಾಖಲಿಸಿದ್ದರು.
ಬೇಕಾಬಿಟ್ಟಿ ಖರ್ಚು
ಡಿ.ಕ್ರಾಸ್ ಸಮೀಪದ ಗೋಲ್ಡ್ ಲೋನ್ ಸಂಸ್ಥೆಯೊಂದರಲ್ಲಿ ಕದ್ದ ಚಿನ್ನವನ್ನು ಅಡವಿಟ್ಟು ಸುಮಾರು 4.68 ಲಕ್ಷ ರೂಪಾಯಿ ಪಡೆದಿರುವ ಮಮತಾ, ಆಕೆಯ ಅಕೌಂಟ್‌ಗೆ ಬಂದ ಹಣ ಡ್ರಾ ಮಾಡಿಕೊಂಡು ಕೇವಲ 15 ದಿನದಲ್ಲಿ ಬೇಕಾಬಿಟ್ಟಿ ಖರ್ಚು ಮಾಡಿದ್ದಾಳೆ. ಇದನ್ನೆಲ್ಲಾ ಪರಿಶೀಲಿಸಿದ ಪೊಲೀಸರು ಅಡವಿಟ್ಟ ಚಿನ್ನವನ್ನು ವಶಕ್ಕೆ ಪಡೆದು ದೂರುದಾರನಿಗೆ ಹಸ್ತಾಂತರ ಮಾಡಿದ್ದಾರೆ.
ಹಾಲು ಮಾರಾಟ ಮಾಡಿ ಸಂಪಾದಿಸಿದ ಹಣದಲ್ಲಿ ನಮ್ಮ ತಾಯಿಗೆ ಚಿನ್ನ ಮಾಡಿಸಿದ್ದೆ, ಮನೆ ಬಾಡಿಗೆಗೆ ಬಂದವರೇ ಈ ರೀತಿ ಮಾಡಿದರೆ ಹೇಗೆ? ಯಾರನ್ನು ನಂಬುವುದು. ಒಡವೆ ಕಳೆದುಕೊಂಡ ನಂತರ ದಿಕ್ಕು ತೋಚದಂತೆ ಆಗಿತ್ತು. ಈಗ ಪೊಲೀಸರು ಆರೋಪಿಯನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದು ಮತ್ತೆ ನನ್ನ ಒಡವೆ ನನಗೆ ವಾಪಸ್ ನೀಡಿದ್ದಾರೆ.ಮುನಿಸ್ವಾಮಯ್ಯ