ಶ್ರೀರಂಗಪಟ್ಟಣ: ದಕ್ಷಿಣ ಗಂಗೆ ಜೀವನದಿ ಕಾವೇರಿಯನ್ನು ಮಾಲಿನ್ಯ ರಹಿತವಾಗಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಅವಧೂತ ವಿನಯ್ ಗೂರೂಜಿ ತಿಳಿಸಿದರು.
ಪಟ್ಟಣದ ಕಾವೇರಿ ಸ್ನಾನಘಟ್ಟದಲ್ಲಿ ಸೋಮವಾರ ಸಂಜೆ ಯುವ ಬ್ರಿಗೆಡ್ ವತಿಯಿಂದ ತುಲಾ ಸಂಕ್ರಮಣದ ಆರಂಭದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾವೇರಿ ದೀಪಾರತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಹಿಂದು ಧರ್ಮದಲ್ಲಿ ಗಾಳಿ, ನೀರು, ಸೂರ್ಯ, ಚಂದ್ರ ಹಾಗೂ ಪ್ರಕೃತಿಯನ್ನು ದೈವದಂತೆ ಆರಾಧಿಸುತ್ತೇವೆ. ಆದರೆ ದುರಾಸೆಗೆ ಮನುಜ ತಾನು ಅತ್ಯಾಧುನಿಕ ಯುಗದಲ್ಲಿದ್ದೇನೆ ಎಂಬ ಮೌಢ್ಯದಿಂದ ಪರಿಸರದ ಮೇಲೆ ನಿರಂತರ ದೌರ್ಜನ್ಯ, ದಬ್ಬಾಳಿಕೆ ಎಸಗಿದರೆ, ಅದರ ಪ್ರಾಯಶ್ಚಿತವನ್ನು ನಾವೇ ಅನುಭವಿಸಬೇಕಾಗಿದೆ. ಹೀಗಾಗಿ ನಮ್ಮನ್ನು ಹೆತ್ತ ತಂದೆ-ತಾಯಿ, ನಮ್ಮ ಸಂಸ್ಕೃತಿ ಸೇರಿದಂತೆ ಇವೆಲ್ಲವನ್ನು ಪ್ರಸ್ತುತ ಪೀಳಿಗೆಯ ಜನರು ಕಡೆಗಣಿಸಿ ನಿರ್ಲಕ್ಷಿಸುತ್ತಿರುವುದೇ ಪ್ರಳಯದ ಸಂಕೇತವಾಗಿದೆ. ಹೀಗಾಗಿ ಮೊದಲು ಯುವ ಜನರು ಮೊಬೈಲ್ ಜೀವನ ಬಿಟ್ಟು ನಮ್ಮ ಸಂಸ್ಕೃತಿಯ ಆಚಾರ-ವಿಚಾರ ಗೌರವಿಸಿ ಬಾಂಧವ್ಯಕ್ಕೆ ಹೊಂದಿಕೊಳ್ಳಬೇಕು ಎಂದರು.
ಯುವ ಬ್ರಿಗೆಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ವಿಶ್ವಕ್ಕೆ ಜ್ಞಾನದೊಂದಿಗೆ ಸುಜ್ಞಾನದ ಮಾರ್ಗದರ್ಶನದ ನೀಡುವವರು ಭಾರತೀಯರು. ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು ಜನಿಸಿದ ಈ ಮಣ್ಣಿನಲ್ಲಿ ಭಾರತೀಯತೆ, ಭಾವೈಕ್ಯತೆ ಹಾಗೂ ಏಕತೆ ಸಾರುವ ಮನಸ್ಥಿತಿ ನಮ್ಮಲ್ಲಿ ಬೆಳೆಸಿಕೊಳ್ಳಬೇಕು ಎಂದರು.
ಬಳಿಕ ವಿಶೇಷ ವೇದಿಕೆಯಲ್ಲಿದ್ದ ವೈದಿಕರು ಜೀವನದಿ ಕಾವೇರಿಗೆ ವಿಶೇಷ ಪೂಜಾರಾಧನೆ ಮೂಲಕ ದೀಪಾರಾಧನೆ ಮಾಡಿದರು.
ಹಿರೇಹಡಗಲಿಯ ಅಭಿನವ ಹಾಲಶ್ರೀ ಅಧ್ಯಕ್ಷತೆ ವಹಿಸಿದ್ದರು. ಚಂದ್ರವನ ಮಠದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜ್ಯೋತಿಷಿ ಡಾ.ವಿ.ಭಾನುಪ್ರಕಾಶ್ ಶರ್ಮ, ಲಕ್ಷ್ಮೀಶ ಶರ್ಮ, ಯುವ ಬ್ರಿಗೇಡ್‌ನ ಮುಖ್ಯಸ್ಥ ರಂಜಿತ್, ಕಾರ್ಯಕರ್ತರಾದ ಕಿರಣ್, ಪ್ರವೀಣ್, ಸಂದೇಶ್, ಸೂರಜ್, ಮನೋಜ್, ಕೃಷ್ಣ, ಶ್ರೇಯಸ್, ಲೋಕೇಶ್ ಇತರರು ಉಪಸ್ಥಿತರಿದ್ದರು.