ಜಿಲ್ಲೆ

ಮಾಲಿನ್ಯಕಾರಕ ಗಣೇಶ ಮೂರ್ತಿಗಳ ತಯಾರಿಕೆ ನಿಷಿದ್ಧ

ಸಕಲೇಶಪುರ: ಪರಿಸರ ಮಾಲಿನ್ಯ ಉಂಟು ಮಾಡುವ ಗಣೇಶ ಮೂರ್ತಿಗಳನ್ನು ತಯಾರಿಸುವುದು, ಮಾರಾಟಮಾಡುವುದು ಹಾಗೂ ಪ್ರತಿಷ್ಠಾಪನೆಗೆ ಅವಕಾಶವಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ ತಿಳಿಸಿದ್ದಾರೆ.

ಪರಿಸರ ಸ್ನೇಹಿ ಹಬ್ಬವಾಗಿದ್ದ ಗೌರಿ ಗಣೇಶ ಹಬ್ಬ ಆಧುನಿಕತೆಯ ಹೆಸರಿನಲ್ಲಿ ವಿವಿಧ ಪ್ಲಾಸ್ಟಿಕ್ ಬಳಕೆ, ವಿಷಕಾರಿ ಬಣ್ಣಗಳ ಬಳಕೆ ಹಾಗೂ ಅಪಾಯಕಾರಿಯಾದ ಪಟಾಕಿಗಳಿಂದಾಗಿ ಶಬ್ದ, ಜಲ ಹಾಗೂ ವಾಯು ಮಾಲಿನ್ಯಗೊಳ್ಳುತ್ತಿದೆ. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ್ ಮೂರ್ತಿ ಸೇರಿದಂತೆ ಯಾವುದೆ ರೀತಿ ಪರಿಸರ ಮಾಲಿನ್ಯ ಗಣೇಶ್ ಮೂರ್ತಿಗಳ ಮಾರಾಟ ಮಾಡುವ ಹಾಗೂ ಸಿದ್ಧಪಡಿಸುವ ಅಂಗಡಿ ಮುಂಗಟ್ಟುಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಗಣಪತಿ ಪ್ರತಿಷ್ಠಾಪನೆಗೂ ಮುನ್ನ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಸ್ಥಳೀಯ ಆಡಳಿತದಿಂದ ನಿರಕ್ಷೇಪಣ ಪತ್ರ ಪಡೆಯುವುದು ಕಡ್ಡಾಯ. ಸ್ಥಳೀಯ ಆಡಳಿತ ಸೂಚಿಸಿದ ಜಲಮೂಲಗಳಲ್ಲೇ ಕಡ್ಡಾಯವಾಗಿ ಗಣೇಶ ಮೂರ್ತಿಯನ್ನು ವಿಸರ್ಜಿಸಬೇಕು.

ವಿಸರ್ಜನೆ ವೇಳೆ ನೀರಿನಲ್ಲಿ ಪೂಜಾ ಸಾಮಗ್ರಿಗಳನ್ನು ಬಿಡುವಂತಿಲ್ಲ. ಜಲಮೂಲಗಳನ್ನು ಮಾಲಿನ್ಯಗೊಳಿಸುವವರ ವಿರುದ್ಧ ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು. ಗಣೇಶಮೂರ್ತಿ ಪ್ರತಿಷ್ಠಾಪನೆಯಿಂದ ವಿರ್ಸಜನೆಯವರೆಗೆ ಶಬ್ದ ಮಾಲಿನ್ಯ ಕಾಪಾಡಬೇಕು. ಹಬ್ಬದ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.