ಬೆಂಗಳೂರು: ನ್ಯಾಯಾಲಯ ಹೇಳಿದ ನಂತರವಷ್ಟೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ತನ್ನ ಕೆಲಸಗಳ ಬಗ್ಗೆ ಎಚ್ಚೆತ್ತುಕೊಳ್ಳುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಮಂಡಳಿಯ ಕಾರ್ಯವೈಖರಿಯ ಬಗ್ಗೆಯೇ ತನಿಖೆ ನಡೆಸಬೇಕಾಗಿದೆ ಎಂದು ತೀಕ್ಷ್ಣವಾಗಿ ಹೇಳಿದೆ.
ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಶುಕ್ರವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಪೀಠ, ಕೆಎಸ್‌ಪಿಸಿಬಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ವಿಚಾರಣೆ ವೇಳೆ ಕೆಎಸ್‌ಪಿಸಿಬಿ ಪರ ವಕೀಲರು ಸಲ್ಲಿಸಿದ ಅನುಪಾಲನಾ ವರದಿ ಗಮನಿಸಿದ ಪೀಠ, ಈವರೆಗೆ ಪರಿಸರ ಸಂರಕ್ಷಣೆ ಕಾಯ್ದೆಯಡಿ ಕೇವಲ 58 ಪ್ರಕರಣಗಳು ದಾಖಲಾಗಿರುವುದಕ್ಕೆ ತೀವ್ರ ಆಶ್ಚರ್ಯ ವ್ಯಕ್ತಪಡಿಸಿತು. ಮಂಡಳಿ ರಚನೆಯಾಗಿ 35 ವಷಗಳು ಕಳೆದಿವೆ. ಮಂಡಳಿ ಇತಿಹಾಸದಲ್ಲಿ ಪರಿಸರ ಸಂಕರ‌್ಷಣೆ ಕಾಯ್ದೆಯಡಿ 58 ಪ್ರಕರಣಗಳಷ್ಟೇ ದಾಖಲಾಗಿವೆ ಎಂದರೆ ನಂಬಲು ಅಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿತು. ಮಂಡಳಿಯ ಜವಾಬ್ದಾರಿ ಕೇವಲ ಪರವಾನಗಿ ನೀಡುವುದಕ್ಕಷ್ಟೇ ಸೀಮಿತವಾದಂತಿದೆ. ನಿಯಮ ಉಲ್ಲಂಘನೆ ವಿಚಾರ ಬಂದಾಗ ಮೌನವಹಿಸುತ್ತದೆ. ಕೋರ್ಟ್ ಹೇಳಿದ ನಂತರವಷ್ಟೇ ಮಂಡಳಿ ತನ್ನ ಕೆಲಸಗಳ ಬಗ್ಗೆ ಎಚ್ಚೆತ್ತುಕೊಳ್ಳುತ್ತದೆ. ಕೆಎಸ್‌ಪಿಸಿಬಿ ಕಾರ್ಯವೈಖರಿಯ ಬಗ್ಗೆಯೇ ತನಿಖೆ ನಡೆಯಬೇಕಾಗಿದೆ ಎಂದು ತೀಕ್ಷ್ಣವಾಗಿ ನುಡಿದ ಪೀಠ, ಅಂತಿಮವಾಗಿ ಅರ್ಜಿ ವಿಚಾರಣೆಯನ್ನು ನ.9ಕ್ಕೆ ಮುಂದೂಡಿತು.
ವರದಿಯಲ್ಲೇನಿದೆ?: ಕೆಎಸ್‌ಪಿಸಿಬಿಯಿಂದ ಈವರೆಗೆ ಒಟ್ಟು 595 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅದರಲ್ಲಿ ಜಲ ಕಾಯ್ದೆಯಡಿ 326, ವಾಯು ಕಾಯ್ದೆಯಡಿ 211, ಪರಿಸರ ಸಂರಕ್ಷಣೆ ಕಾಯ್ದೆಯಡಿ 58 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 595 ಪ್ರಕರಣಗಳಲ್ಲಿ 34 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, 338 ಪ್ರಕರಣಗಳು ಬಾಕಿ ಇವೆ. ಜಲ ಮತ್ತು ವಾಯು ಕಾಯ್ದೆಯಡಿ ರಾಜ್ಯ ಮೇಲ್ಮನವಿ ಪ್ರಾಧಿಕಾರದಲ್ಲಿ 647 ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ. 625 ಮೇಲ್ಮನವಿಗಳು ಇತ್ಯರ್ಥಗೊಂಡಿದ್ದು, 22 ಮೇಲ್ಮನವಿಗಳು ಬಾಕಿ ಇದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದ ಅನುಪಾಲನಾ ವರದಿಯಲ್ಲಿ ಹೇಳಲಾಗಿದೆ.