ಜಿಲ್ಲೆ

ಮಾರ್ಟಿಗೇಜ್ ಸಾಲದ ಮಿತಿ ಹೆಚ್ಚಳ

ಬೀದರ್: ಶತಮಾನೋತ್ಸವ ಸಂಭ್ರಮದಲ್ಲಿರುವ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ ಡಿಜಿಟಲ್ ರೂಪದ ಮಾರ್ಟಿಗೇಜ್ (ಭೂಮಿ ಮೇಲೆ ಋಣಭಾರ) ಸಾಲದ ಮಿತಿಯನ್ನು ಒಂದು ಲಕ್ಷದಿಂದ ಮೂರು ಲಕ್ಷಕ್ಕೆ ಹೆಚ್ಚಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಇ ಆಡಳಿತ ಇಲಾಖೆ ಜಾರಿಗೆ ತಂದಿರುವ ಡಿಜಿಟಲ್ ರೂಪದ ಮಾರ್ಟಿಗೇಜ್ ಸಾಲ ರೈತರಿಗೆ ಸಹಕಾರಿಯಾಗಿದೆ. ಸದ್ಯ ಒಂದು ಲಕ್ಷ ರೂ.ವರೆಗಿನ ಮಾರ್ಟಿಗೇಜ್ ಸಾಲ ಸಂಘಗಳಲ್ಲೇ ಲಭ್ಯ ಇದೆ. ಅದಕ್ಕಿಂತ ಹೆಚ್ಚಿನ ಸಾಲಕ್ಕಾಗಿ ಉಪ ನೋಂದಣಾಕಾರಿ ಕಚೇರಿಗೆ ಹೋಗಬೇಕಿದೆ. ಹೀಗಾಗಿ ರೈತರ ಅಲೆದಾಟ ತಪ್ಪಿಸಲು ಮಾರ್ಟಿಗೇಜ್ ಸಾಲದ ಮಿತಿಯನ್ನು 3 ಲಕ್ಷದವರೆಗೆ ವಿಸ್ತರಿಸಲಾಗಿದೆ. ಇದು ಏ.1ರಿಂದ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

ಬರುವ ದಿನಗಳಲ್ಲಿ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್)ಗಳನ್ನು ಕೇಂದ್ರ ಸರ್ಕಾರದ ಪ್ಯಾಕ್ಸ್ ಗಣಕೀಕರಣ ಯೋಜನೆ ಅಡಿ ಗಣಕೀಕರಣ ಮಾಡಲಾಗುವುದು. ಸರ್ಕಾರದ ನಿದರ್ೇಶನದಂತೆ ಪಿಕ್ ಪಿಎಸ್ ಗಳನ್ನು ಕಾಮನ್ ಸರ್ವಿಸ್ ಸೆಂಟರ್ ಗಳಾಗಿ ಪರಿವರ್ತಿಸಲಾಗುವುದು. ಸಹಕಾರ ಸಂಘಗಳ ಮೂಲಕ ಗ್ರಾಮಗಳಲ್ಲಿ ಸರ್ಕಾರದ ಸುಮಾರು 300 ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಶ್ರಮಿಸುವುದಾಗಿ ತಿಳಿಸಿದ್ದಾರೆ.

ಡಿಜಿಟಲ್ ರೂಪದ ಮಾರ್ಟಿಗೇಜ್ ಸಾಲದ ಮಿತಿ ಏರಿಕೆ ರೈತರಿಗೆ ಆದಾಯೋತ್ಪನ್ನ ಚಟುವಟಿಕೆ, ಶಿಕ್ಷಣ, ಆರೋಗ್ಯ, ಜೀವನ ಸಮೃದ್ಧಿಗೆ ಸಹಕಾರಿ ಆಗಲಿದೆ. ಜಿಲ್ಲೆಯ ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೂ.1000 ಕೋಟಿ ಕೃಷಿ ಸಾಲ: ಡಿಸಿಸಿ ಬ್ಯಾಂಕ್ 188 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಯೋಜನೆಗಳನ್ನು ಸಮರ್ಪಕವಾಗಿ ರೈತರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಜಿಲ್ಲೆಯ 2,15,000 ಕೃಷಿ ಅವಲಂಬಿತ ಕುಟುಂಬಗಳ ಪೈಕಿ 1,75,000 ರೈತರು ನೇರವಾಗಿ ಸಂಘಗಳಲ್ಲಿ ಸುಮಾರು 1,000 ಕೋಟಿ ರೂ. ಕೃಷಿ ಸಾಲ ಪಡೆದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.