ಜಿಲ್ಲೆ

ಮಾರ್ಚ್‌ನಲ್ಲಿ ಮನೆಗಳ ಉದ್ಘಾಟನೆ, ವಸತಿ ಸಚಿವ ವಿ.ಸೋಮಣ್ಣ ಅಭಯ, ವಿವಿಧೆಡೆ ಕಾಮಗಾರಿ ಪರಿಶೀಲನೆ

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ವಿವಿಧೆಡೆಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ಹಾಗೂ ಬೆಂಗಳೂರು ವಸತಿ ಯೋಜನೆಯಡಿ ನಿರ್ಮಿಸುತ್ತಿರುವ ಬಹುಮಹಡಿ ಮನೆಗಳನ್ನು ಮಾರ್ಚ್ ತಿಂಗಳಿನಲ್ಲಿ ಮುಖ್ಯಮಂತ್ರಿಗಳಿಂದ ಉದ್ಘಾಟಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಬೆಂಗಳೂರು ಉತ್ತರ ತಾಲೂಕಿನ ಹುಸ್ಕೂರು ಗ್ರಾಪಂನ ಪಿಳ್ಳಹಳ್ಳಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ಹಾಗೂ ಬೆಂಗಳೂರು ವಸತಿ ಯೋಜನೆಯಡಿ ನಿರ್ಮಿಸುತ್ತಿರುವ ಬಹುಮಹಡಿ ಮನೆಗಳ ನಿರ್ಮಾಣ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿ ಮಾತನಾಡಿದರು.

ಯಲಹಂಕ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡುತ್ತಿರುವ ಮೂರು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಮಾರ್ಚ್ 25ರಂದು ಈ ಭಾಗದಲ್ಲಿ 500ಕ್ಕೂ ಹೆಚ್ಚು ಮನೆಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದರು.

ಬೆಂಗಳೂರಿನ ಕೆಲ ಭಾಗದಲ್ಲಿ 54 ಸಾವಿರ ಮನೆ ನಿರ್ಮಾಣ ಗುರಿ ಹೊಂದಲಾಗಿದೆ ಎಂದ ಅವರು, ಪ್ರಧಾನಮಂತ್ರಿಗಳ ಆಶಯದಂತೆ ಸರ್ಕಾರ ಪ್ರತಿಯೊಬ್ಬರಿಗೂ ಸೂರು ಎಂಬ ಮಹತ್ವದ ಯೋಜನೆ ಕೈಗೆತ್ತಿಕೊಂಡಿದ್ದು, ಸಾಕಷ್ಟು ಬಡವರಿಗೆ ಅನುಕೂಲವಾಗಿದೆ. ಮಾರ್ಚ್ ಅಂತ್ಯದೊಳಗೆ ರಾಜ್ಯದಾದ್ಯಂತ 8 ಸಾವಿರಕ್ಕೂ ಹೆಚ್ಚು ಮನೆಗಳನ್ನು ಉದ್ಘಾಟಿಸಲಾಗುವುದು ಎಂದರು.

ತರಾಟೆ: 2 ವರ್ಷದ ಹಿಂದೆಯೇ ಬಹುಮಹಡಿ ಮನೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದರೂ ಕಾಮಗಾರಿ ವಿಳಂಬವಾಗಿದ್ದು, ನಿರೀಕ್ಷಿತ ಪ್ರಗತಿ ಆಗಿಲ್ಲದಿರುವುದನ್ನು ಕಂಡ ಸಚಿವರು ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತಗೆದುಕೊಂಡರು. ನಿಗದಿತ ಸಮಯಕ್ಕೆ ಕಾಮಗಾರಿ ಮಾಡದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.

ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಕ್ಷೇತ್ರವ್ಯಾಪ್ತಿ 15ಸಾವಿರಕ್ಕೂ ಹೆಚ್ಚು ಮನೆ ನಿರ್ಮಾಣ ಕೆಲಸ ನಡೆಯುತ್ತಿದೆ. 2022ರ ಡಿಸೆಂಬರ್‌ನಲ್ಲಿ ಎಲ್ಲ ಮನೆಗಳನ್ನು ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುವುದು ಎಂದರು.

ಯಲಹಂಕ ಬಿಜೆಪಿ ಅಧ್ಯಕ್ಷ ಹನುಮಯ್ಯ, ಬಿಜೆಪಿ ವಕ್ತಾರ ಎಚ್.ಎಸ್.ಅರುಣ್‌ಕುಮಾರ್, ಹುಸ್ಕೂರು ಗ್ರಾ.ಪಂ ಅಧ್ಯಕ್ಷೆ ಅನ್ನಪೂರ್ಣ, ಉಪಾಧ್ಯಕ್ಷ ರಮೇಶ್, ಸದಸ್ಯ ಮಹೇಶ್, ನಾಗರಾಜು, ಗುತ್ತಿಗೆದಾರ ಪ್ರೇಮರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಚೋದನೆ ಸಲ್ಲ: ಧರ್ಮವನ್ನು ಮನೆಯಲ್ಲಿ ಆಚರಣೆ ಮಾಡಿಕೊಳ್ಳಲು ಯಾರ ಅಡ್ಡಿ ಇಲ್ಲ. ಕಾಲೇಜಿನಲ್ಲಿ ಇರುವ ಶಿಸ್ತು ಪಾಲಿಸಬೇಕಾಗುತ್ತದೆ. ಕಾಲೇಜಿಗೆ ಹೋಗುವುದು ವಿದ್ಯೆ ಕಲಿಕೆಗೆ ಹೊರತು ಧರ್ಮ ಪ್ರಚಾರಕ್ಕಲ್ಲ. ಈ ಪ್ರಕರಣ ನ್ಯಾಯಲದಲ್ಲಿದೆ. ನ್ಯಾಯಾಲಯದ ತೀರ್ಪಿಗೆ ಪ್ರತಿಯೊಬ್ಬರೂ ಬದ್ಧರಾಗಿರಬೇಕು ಎಂದು ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.