ಜಿಲ್ಲೆ

ಮಾರ್ಚ್ 8 ರಂದು ರಾಷ್ಟ್ರೀಯ ಲೋಕ ಅದಾಲತ್

ಚಿತ್ರದುರ್ಗ: ಜಿಲ್ಲೆಯಲ್ಲಿ ಮಾರ್ಚ್ 8 ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಿರುವುದಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಡಿಸೆಂಬರ್ 14 ರಂದು ನಡೆದಿದ್ದ ಮೆಗಾ ಲೋಕ ಅದಾಲತ್‌ನಲ್ಲಿ ಬಾಕಿ ಇದ್ದ 4, 777 ವ್ಯಾಜ್ಯ ಹಾಗೂ 98,452 ವ್ಯಾಜ್ಯಪೂರ್ವ ಸಹಿತ ಜಿಲ್ಲಾದ್ಯಂತ 1,03,229 ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲಾಗಿದೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 11 ದಂಪತಿಗಳ ಮನವೊಲಿಸಿ ಒಂದು ಮಾಡಲಾಗಿದೆ ಎಂದರು.

ಪ್ರಸ್ತುತ ಜಿಲ್ಲಾದ್ಯಂತ 44,632 ಪ್ರಕರಣಗಳು ಬಾಕಿ ಇದ್ದು, ಅದಾಲತ್‌ನಲ್ಲಿ 3707 ಪ್ರಕರಣಗಳನ್ನು ಇತ್ಯರ್ಥಕ್ಕೆ ಗುರುತಿಸಲಾಗಿದೆ. 15 ಪ್ರಕರಣಗಳಲ್ಲಿ ಪಕ್ಷಗಾರರ ಮನವೊಲಿಸಿ ರಾಜಿ ಸಂಧಾನಕ್ಕೆ ಒಪ್ಪಿಸಲಾಗಿದೆ. ಕಳೆದ ಅದಾಲತ್‌ಗಿಂತಲೂ ಹೆಚ್ಚಿನ ಪ್ರಕರಣಗಳನ್ನು ಈ ಬಾರಿ ಇತ್ಯರ್ಥ ಪಡಿಸುವ ಗುರಿ ಇದೆ. 4,821 ಚೆಕ್ ಅಮಾನ್ಯ, 827 ವಿವಾಹ, 347 ಕೌಟುಂಬಿಕ ವ್ಯಾಜ್ಯ, 3,801 ಆಸ್ತಿ ವಿಭಾಗ ಹಾಗೂ ಜೀವ ನಾಂಶ ಕೋರಿ ಸಲ್ಲಿಸಿದ 641 ಪ್ರಕರಣಗಳಿದ್ದು, ಈ ಎಲ್ಲ ಸಿವಿಲ್ ವ್ಯಾಜ್ಯಗಳು ಬಗೆಹರಿದರೆ ಅಂದಾಜು 25000 ಜನರು ಕೋರ್ಟಿಗೆ ಅಲೆ ದಾಡುವುದು ತಪ್ಪುತ್ತದೆ. ಸೌಹಾರ್ದಯುತವಾಗಿ ಬಗೆಹರಿದರೆ ಮೇಲ್ಮನವಿ ಹೋಗುವುದೂ ತಪ್ಪುತ್ತದೆ ಎಂದರು.

ಸಿವಿಲ್ ನ್ಯಾಯಾಲಯದಲ್ಲಿ ಆಸ್ತಿ ವಿಭಾಗ ಪ್ರಕರಣ ಇತ್ಯರ್ಥಕ್ಕೆ 3 ಬಾರಿ ನ್ಯಾಯಾಲಯ ಆದೇಶಿಸಬೇಕಾಗುತ್ತದೆ. ಮೇಲ್ಮನವಿ ಸಲ್ಲಿಸಿ ದರೆ ಪ್ರಕರಣ ಇತ್ಯರ್ಥದವರೆಗೆ ಮುಂದಿನ ಆದೇಶ ಹೊರಡಿಸಲು ಸಾಧ್ಯವಾಗದು. ಇದರಿಂದಾಗಿ ಪ್ರಕರಣ ವಿಲೇವಾರಿ ತಲೆಮಾರುಗಳ ಕಾಲ ಮುಂದೆ ಹೋಗುತ್ತದೆ. ಹೊಂದಾಣಿಕೆಯಿಂದ ಇತ್ಯರ್ಥವಾದರೆ ತೀರ್ಪು ಶೀಘ್ರ ಸಿಗಲಿದೆ. ದಂಪತಿ ಸೋತು- ಗೆದ್ದರೆ ವಿಚ್ಛೇದನ ಪ್ರಮಾಣ ಕಡಿಮೆಯಾಗುತ್ತದೆ ಎಂದರು.

ಕಕ್ಷಿದಾರರು ನೇರ ಅಥವಾ ವಕೀಲರ ಮೂಲಕ ಲೋಕ ಅದಾಲತ್‌ನಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ ಛ್ಝಚ್ಚಜಿಠ್ಟಿಛ್ಠ್ಟಜ3ಃಜಞಜ್ಝಿ.್ಚಟಞ ಹಾಗೂ ಸದಸ್ಯ ಕಾರ‌್ಯದರ್ಶಿ ಕಚೇರಿ ದೂರವಾಣಿ ಸಂಖ್ಯೆ 9141193935/ 08194-222322ನ್ನು ಸಂಪರ್ಕಿಸಬಹುದು ಎಂದರು.

ನೂತನ ಜಿಲ್ಲಾ ನ್ಯಾಯಾಲಯದ ಸಂಕೀರ್ಣ ನಿರ್ಮಾಣಕ್ಕೆ ನಗರದ ಹೊರ ವಲಯದಲ್ಲಿ 9.25 ಎಕರೆ ಜಮೀನು ಗುರುತಿಸಿ ಸ್ವಾಧೀನಕ್ಕೆ ಪಡೆಯಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು. ಈಗಿರುವ ಕೋರ್ಟ್ ಕಟ್ಟಡವನ್ನು 1965ರಲ್ಲಿ ನಿರ್ಮಿಸಲಾಗಿದೆ. ಮೊಳಕಾಲ್ಮೂರು ಪಟ್ಟಣದಲ್ಲೂ ನೂತನ ತಾಲೂಕು ನ್ಯಾಯಾಲಯ ಕಟ್ಟಡಕ್ಕೆ ಜಾಗ ಗುರುತಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ‌್ಯದರ್ಶಿ ಎಂ.ವಿಜಯ್ ಇದ್ದರು.