ಜಿಲ್ಲೆ

ಮಾರ್ಚ್ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ

ಚಿತ್ರದುರ್ಗ: ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಮಾರ್ಚ್ 1ರಿಂದ 20ರವರೆಗೆ ನಡೆಯಲಿದೆ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಡಿಸಿ ಕಚೇರಿಯಲ್ಲಿ ಬುಧವಾರ ಪರೀಕ್ಷಾ ಸಿದ್ಧತಾ ಸಭೆಯಲ್ಲಿ ಮಾತನಾಡಿ, ವ್ಯವಸ್ಥಿತವಾಗಿ ಪರೀಕ್ಷಾ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾರ್ಗಸೂಚಿಗಳನ್ನು ಎಲ್ಲ ಹಂತದ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾ ಲಿಸಬೇಕು. ಪರೀಕ್ಷೆ ಗೌಪ್ಯತೆ, ಪಾವಿತ್ರ್ಯತೆ ಮತ್ತು ಸಮಗ್ರತೆಗೆ ಧಕ್ಕೆಯಾಗದಂತೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಪರೀಕ್ಷೆ ಕಾರ್ಯ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕು. ಪೊಲೀಸ್ ರಕ್ಷಣೆಯಲ್ಲೇ ಪ್ರಶ್ನೆಪತ್ರಿಕೆಗಳನ್ನು ಕೇಂದ್ರಗಳಿಗೆ ತಲುಪಿಸಬೇಕು. ತಹಸೀಲ್ದಾರ್, ಬಿಇಒ ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರನ್ನು ಒಳಗೊಂಡ ಪ್ರಶ್ನೆ ಪತ್ರಿಕೆ ಪಾಲಕರ ವಿಶೇಷ ತ್ರಿಸದಸ್ಯ ಸಮಿತಿ ನಿಯಮಾನುಸಾರ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಉತ್ತಮ, ಆಹ್ಲಾದಕರ ವಾತಾವರಣದಲ್ಲಿ ಪರೀಕ್ಷೆ ಬರೆಯುವಂತಾಗಬೇಕು. ಕೇಂದ್ರಗಳಲ್ಲಿ ಡೆಸ್ಕ್, ಗಾಳಿ-ಬೆಳಕಿನ ವ್ಯವಸ್ಥೆ, ಕುಡಿಯುವ ನೀರು, ಶೌಚಗೃಹ ಸೇರಿ ಅಗತ್ಯ ಸೌಲಭ್ಯಗಳಿರಬೇಕು. ಕೇಂದ್ರದ ಸುತ್ತಲೂ 200 ಮೀಟರ್ ನಿಷೇಧಿತ ಪ್ರದೇಶವೆಂದು ಡಿಸಿ ಆದೇಶಿಸಲಿದ್ದಾರೆ ಎಂದರು.

ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆ ತೆರೆಯುವಾಗ ಹಾಗೂ ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡುವಾಗ ಸಿಸಿ ಟಿವಿ ಕ್ಯಾಮರಾದಡಿ ಕಾರ್ಯನಿರ್ವಹಿಸಬೇಕು ಮತ್ತು ಎಲ್ಲ ಕೊಠಡಿಗಳಿಗೆ ಸಿಸಿ ಟಿವಿ ಕ್ಯಾಮರಾ ಅಳವಡಿಸಿರಬೇಕು ಎಂದು ತಿಳಿಸಿದರು.

ಪಿಯು ಡಿಡಿ ಆರ್. ಪುಟ್ಟಸ್ವಾಮಿ ಮಾತನಾಡಿ, ಪರೀಕ್ಷಾ ಕೇಂದ್ರಗಳಿಗೆ ಸಹ ಮುಖ್ಯಅಧೀಕ್ಷಕರು ಹಾಗೂ ಜಾಗೃತ ದಳಗಳನ್ನು ನೇಮಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್ ಇರಲಿದೆ. ಮುಖ್ಯಅಧೀಕ್ಷಕರು ಗೈರಾದ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‌ಲೈನ್ ಮೂಲಕ ದಾಖಲಿಸಬೇಕು. ಕೇಂದ್ರದ ಮುಖ್ಯಸ್ಥರು ಬೆಳಗ್ಗೆ 8ಕ್ಕೆ ಹಾಜರಿರಬೇಕು. ವಿದ್ಯಾರ್ಥಿಗಳು ಮೊಬೈಲ್ ಫೋನ್ ಅಥವಾ ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

15991 ವಿದ್ಯಾರ್ಥಿಗಳು

ಚಿತ್ರದುರ್ಗ ತಾಲೂಕಿನ 10 ಕೇಂದ್ರಗಳಿಗೆ 6450 ವಿದ್ಯಾರ್ಥಿಗಳು, ಚಳ್ಳಕೆರೆ-4ಕ್ಕೆ 2986, ಹಿರಿಯೂರಿನ 4ಕ್ಕೆ 1946, ಹೊಸದುರ್ಗ-4-2151 ವಿದ್ಯಾರ್ಥಿಗಳು, ಮೊಳಕಾಲ್ಮೂರು-2-977 ಹಾಗೂ ಹೊಳಲ್ಕೆರೆ ತಾಲೂಕಿನ 2 ಪರೀಕ್ಷಾ ಕೇಂದ್ರಗಳಿಗೆ 672 ವಿದ್ಯಾರ್ಥಿಗಳು ಸೇರಿ 26 ಪರೀಕ್ಷಾ ಕೇಂದ್ರಗಳಿಂದ 15991 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು. ತಹಸೀಲ್ದಾರ್‌ಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಗಳು, ಪದವಿಪೂರ್ವ ಕಾಲೇಜು ಪ್ರಾಂಶುಪಾಲರು ಮತ್ತಿತರ ಅಧಿಕಾರಿಗಳು ಇದ್ದರು.

---

ಪರೀಕ್ಷಾ ವೇಳಾಪಟ್ಟಿ

ಮಾರ್ಚ್ 1ರಂದು ಕನ್ನಡ, ಅರೇಬಿಕ್. 3-ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ. 4-ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, 5-ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ. 7- ಇತಿಹಾಸ, ಭೌತಶಾಸ್ತ್ರ. 10-ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ. 12-ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ. 13-ಅರ್ಥ ಶಾಸ್ತ್ರ. 15- ಇಂಗ್ಲೀಷ್. 17- ಭೂಗೋಳ ಶಾಸ್ತ್ರ. 18-ಜೀವಶಾಸ್ತ್ರ, ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ. 19-ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಆ್ಯಂಡ್ ವೆಲ್‌ನೆಸ್ ಹಾಗೂ 20-ಹಿಂದಿ.