ಜಿಲ್ಲೆ

ಮಾರ್ಚ್ 10ರಿಂದ ಹಾಸನದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ : ಶಾಸಕ ಎಚ್.ಡಿ. ರೇವಣ್ಣ

ಹಾಸನ: ಜೆಡಿಎಸ್ ಪಂಚರತ್ನ ಯಾತ್ರೆ ಮಾರ್ಚ್ 10 ರಿಂದ 17 ರವರೆಗೆ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಂಚರಿಸಲಿದೆ ಎಂದು ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ತಿಳಿಸಿದರು.

ನಗರದ ಸಂಸದರ ನಿವಾಸದಲ್ಲಿ ಸೋಮವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ ಅವರು, ಮಾ.10 ಬೆಳಗ್ಗೆ ಬೇಲೂರಿನ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಆರಂಭವಾಗುವುದು. ಮಾ.13ರಂದು ಚನ್ನರಾಯಪಟ್ಟಣ, ಮಾ.14 ಅರಸೀಕೆರೆ, ಮಾ.15 ಹೊಳೆನರಸೀಪುರ, 16 ಅರಕಲಗೂಡು ಮತ್ತು ಮಾ. 17 ರಂದು ಸಕಲೇಶಪುರದಲ್ಲಿ ಯಾತ್ರೆಯ ಕಾರ್ಯಕ್ರಮ ನಡೆಯಲಿದೆ ಎಂದರು.

ಈ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮತ್ತು ಇತರ ಮುಖಂಡರು ಹಾಗೂ ಜಿಲ್ಲೆಯ ಎಲ್ಲ ಜೆಡಿಎಸ್ ಶಾಸಕರು ಪಾಲ್ಗೊಳ್ಳುವರು. ಪಂಚರತ್ನ ಯಾತ್ರೆ ಈ ಬಾರಿ ಹಾಸನ ನಗರಕ್ಕೆ ಬರುತ್ತಿಲ್ಲ. ಹಾಸನ ಜಿಲ್ಲಾ ಕೇಂದ್ರವಾಗಿರುವುದರಿಂದ ಮುಂದೆ ಬೃಹತ್ ಸಮಾವೇಶ ಆಯೋಜಿಸುವ ಮೂಲಕ ಪಂಚರತ್ನ ಯಾತ್ರೆ ನಡೆಸಲಾಗುವುದು ಎಂದು ಹೇಳಿದರು.

ಎಚ್.ಡಿ. ಕುಮಾರಸ್ವಾಮಿ ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಆಗಿದ್ದಾಗ ಹಾಸನ ಜಿಲ್ಲೆಗೆ ನೀಡಿದ್ದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ತಡೆಹಿಡಿಯಿತು. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಹಾಸನ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿರಲಿಲ್ಲ. ಈ ಎರಡೂ ರಾಷ್ಟ್ರೀಯ ಪಕ್ಷಗಳು ಹಾಸನ ಜಿಲ್ಲೆಗೆ ಏನು ಕೊಡುಗೆ ನೀಡಿವೆ ಎಂಬುದನ್ನು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು.

ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. 2ನೇ ಪಟ್ಟಿ ಶೀಘ್ರದಲ್ಲೇ ಪ್ರಕಟವಾಗಲಿದೆ. ಆದರೆ ಎರಡೂ ರಾಷ್ಟ್ರೀಯ ಪಕ್ಷಗಳು ಇನ್ನೂ ಮೊದಲ ಪಟ್ಟಿ ಬಿಡುಗಡೆ ಮಾಡಲು ಪರದಾಡುತ್ತಿದ್ದಾರೆ. ಅಭ್ಯರ್ಥಿಗಳ ಕೊರತೆಯಿಂದಾಗಿ ಜೆಡಿಎಸ್ ಮುಖಂಡರನ್ನು ಸಂಪರ್ಕಿಸುತ್ತಿದ್ದಾರೆ ಎಂದು ದೂರಿದರು.

ಹಾಸನ ಜಿಲ್ಲೆ ಜೆಡಿಎಸ್ ರಾಜಕೀಯವನ್ನು ರೇವಣ್ಣ ಅವರಿಗೇ ಬಿಟ್ಟಿದ್ದೇನೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿಕೆ ಕುರಿತು ಪ್ರಶ್ನಿಸಿದಾಗ, ‘ನಾನು, ದೇವೇಗೌಡರು, ಕುಮಾರಣ್ಣ, ಸಿ.ಎಂ. ಇಬ್ರಾಹಿಂ ಹಾಗೂ ಜಿಲ್ಲೆಯ ಎಲ್ಲ ಶಾಸಕರು ಮತ್ತು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆ ಎಲ್ಲ ಕ್ಷೇತ್ರಗಳಿಗೆ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಈ ಬಾರಿ ಜಿಲ್ಲೆಯ ಎಲ್ಲ 7 ಸ್ಥಾನಗಳನ್ನು ಜೆಡಿಎಸ್ ಗೆಲ್ಲಲಿದೆ’ ಎಂದು ಪ್ರತಿಕ್ರಿಯಿಸಿದರು.

ಶಿವಲಿಂಗೇಗೌಡ ವಿರುದ್ಧ ಟೀಕೆ:

ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡರು ಪಕ್ಷ ತೊರೆಯುವುದಿಲ್ಲ ಎಂಬುದಾಗಿ ಕೊನೆಯವರೆಗೂ ಹೇಳಿಕೊಂಡು ಬಂದು ಈಗ ಕೈಕೊಟ್ಟಿದ್ದಾರೆ. ಅವರು ಪಕ್ಷ ತೊರೆಯದಂತೆ ಮನವೊಲಿಸುವ ಕೆಲಸವನ್ನೂ ಮಾಡಿದ್ದೇವೆ. ಅವರಿಗಾಗಿ ಏನೆಲ್ಲಾ ತ್ಯಾಗ ಮಾಡಿದ್ದೇನೆ ಎಂಬುದು ಅರಸೀಕೆರೆ ಕ್ಷೇತ್ರದ ಜನರಿಗೆ ಗೊತ್ತಿದೆ. ಅದಕ್ಕೆ ಮುಂದಿನ ದಿನಗಳಲ್ಲಿ ಎಲ್ಲ ದಾಖಲೆ ಒದಗಿಸಲಾಗುವುದು ಎಂದು ಗುಡುಗಿದರು.

ಅರಸೀಕೆರೆ ಕ್ಷೇತ್ರಕ್ಕೆ ನಾನು ಮತ್ತು ಕುಮಾರಸ್ವಾಮಿ ಎಷ್ಟು ಯೋಜನೆಗಳನ್ನು ನೀಡಿದ್ದೇವೆ ಎಂಬುದನ್ನು ದಾಖಲೆ ತೆಗೆದು ನೋಡಿಕೊಳ್ಳಲಿ. ಈಗ ಶಿವಲಿಂಗೇಗೌಡರು ತಮ್ಮ ಸ್ವಾರ್ಥಕ್ಕಾಗಿ ಸಿದ್ದರಾಮಯ್ಯನವರಿಂದ ಅರಸೀಕೆರೆ ಕ್ಷೇತ್ರ ಅಭಿವೃದ್ಧಿ ಆಯಿತು ಎಂಬುದಾಗಿ ಸುಳ್ಳು ಹೇಳುತ್ತಿದ್ದಾರೆ. ಶಿವಲಿಂಗೇಗೌಡರು ಜೆಡಿಎಸ್‌ನಿಂದ ಗೆದ್ದಿದ್ದರಿಂದ ತಾನೆ ಅಷ್ಟೆಲ್ಲಾ ಅಭಿವೃದ್ಧಿ ಮಾಡಲು ಸಾಧ್ಯವಾಗಿದ್ದು ಎಂದು ಕಿಡಿಕಾರಿದರು.

ಜೆಡಿಎಸ್ ವಿರುದ್ಧ ಆರೋಪ ಮಾಡುವ ಯಾವ ನೈತಿಕತೆಯೂ ಕಾಂಗ್ರೆಸ್ ನಾಯಕರಿಗಿಲ್ಲ. ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ರಾಹುಲ್ ಗಾಂಧಿಯನ್ನು ಕರೆಸಿ, ಬಿಜೆಪಿಯ ಬಿ ಟೀಮ್ ಜೆಡಿಎಸ್ ಎಂಬುದಾಗಿ ಅಪಪ್ರಚಾರ ಮಾಡಿಸಿದರು. ಇದರಿಂದ ಪರೋಕ್ಷವಾಗಿ ಬಿಜೆಪಿ ಗೆಲುವಿಗೆ ಕಾರಣರಾದರು ಎಂದು ದೂರಿದರು.

ಹಿಂದೆ ಐದು ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಎಲ್ಲ ಭಾಗ್ಯಗಳನ್ನು ಕೊಟ್ಟೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ 68 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಆ ಪಕ್ಷದ ಸ್ಥಾನಗಳ ಸಂಖ್ಯೆ ಎಲ್ಲಿಗೆ ಕುಸಿಯಲಿದೆ ಎಂಬುದನ್ನು ಕಾದು ನೋಡಿ ಎಂದರು.