ಹಳಿಯಾಳ: ಜಿಲ್ಲಾಧಿಕಾರಿಗಳ ಸೂಚಿಸಿದ ಮಾರ್ಗಸೂಚಿಯಂತೆ ಈ ಬಾರಿ ಮಾವು ಬೆಳೆಯ ಮಾರಾಟ ಹಾಗೂ ಸಾಗಾಟದ ವ್ಯವಸ್ಥೆಯನ್ನು ಮಾಡಲಾಗುವುದು. ಅದಕ್ಕಾಗಿ ಮಾವು ಬೆಳೆಗಾರರು ಮತ್ತು ಖರೀದಿದಾರರು ತಾಲೂಕಾಡಳಿತದೊಂದಿಗೆ ಸಹಕರಿಸಿ ಕೈಜೋಡಿಸಬೇಕು ಎಂದು ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಹೇಳಿದರು.
ಮಿನಿ ವಿಧಾನಸೌಧದಲ್ಲಿ ಬುಧವಾರ ಆಯೋಜಿಸಿದ್ದ ಮಾವು ಬೆಳೆಗಾರರ ಮತ್ತು ಖರೀದಿದಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲಾಕ್ ಡೌನ್ದಿಂದಾಗಿ ಮಾವು ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ ಮೇಲಾಗಿ ಈ ಬಾರಿ ಹವಾಮಾನ ಕೊರತೆಯಿಂದ ಮಾವಿನ ಪೈರಿನ ಇಳುವರಿ ಕಡಿಮೆಯಾಗಿದೆ ಹೀಗಿರುವಾಗ ಯಾವುದೇ ವಂಚನೆ ಮೋಸದ ವಹಿವಾಟಿಗೆ ಆವಕಾಶ ನೀಡುವುದಿಲ್ಲ ಎಂದರು.
ಮಾವು ಖರೀದಿದಾರ ಹಿದಾಯುತುಲ್ಲಾ ಸಾವಕಾರ, ‘ಮಾವು ಮಾರುಕಟ್ಟೆಯಲ್ಲಿ ಮಾವಿನ ಖರೀದಿಯು ಆರಂಭಗೊಂಡಿಲ್ಲ. ಮೇಲಾಗಿ ಈ ಬಾರಿ ಮಾವಿನ ದರ ನಿಗದಿಯಾಗಿಲ್ಲ. ಲಾಕ್ ಡೌನ್ದಿಂದಾಗಿ ಮಾವು ಖರೀದಿಗೆ ಹಾಗೂ ಮಾರಾಟಕ್ಕೆ ತೊಂದರೆಯಾಗಲಿದೆ. ಅದಕ್ಕಾಗಿ ತಾಲೂಕಾಡಳಿತ ಮಾವು ವಹಿವಾಟಿಗೆ ವ್ಯವಸ್ಥೆ ಮಾಡಿ ಕೊಡಬೇಕು’ ಎಂದರು.
ಖರೀದಿದಾರ ನಿಸ್ಸಾರ್ ಅಹಮದ್ ದುರ್ಗಾಡಿ ಮಾತನಾಡಿ, ‘ಖರೀದಿಸಿದ ಮಾವು ಲಾರಿಗೆ ತುಂಬಿಸಲು ಮತ್ತು ಮಾವು ಬೇರ್ಪಡಿಸಲು ಪ್ರತಿ ಖರೀದಿದಾರರಿಗೆ ಕನಿಷ್ಠವೆಂದರೂ ಹತ್ತು ದಿನಗೂಲಿಗಳು ಬೇಕಾಗುತ್ತಾರೆ. ಈ ಕರೊನಾ ವೈರಸ್ ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡಿ ವಹಿವಾಟು ನಡೆಸಲು ಪರವಾನಗಿ ನೀಡಬೇಕು’ ಎಂದರು.
ಮಾವು ಬೆಳೆಗಾರರ ಪರವಾಗಿ ಮಾತನಾಡಿದ ತಾಪಂ ಮಾಜಿ ಅಧ್ಯಕ್ಷ ದೇಮಣ್ಣ ಕರ್ಜಗಿ, ಈ ಬಾರಿ ಮಾವಿನ ಇಳುವರಿ ಅತ್ಯಂತ ಕಡಿಮೆಯಾಗಿದೆ. ಲಾಕ್ಡೌನ್ನಿಂದಾಗಿ ಹಳಿಯಾಳ ಪಟ್ಟಣಕ್ಕೆ ತಂದು ಮಾರಾಟ ಮಾಡುವ ಸ್ಥಿತಿಯಲ್ಲಿ ಬೆಳೆಗಾರರು ಇಲ್ಲ. ಅದಕ್ಕಾಗಿ ಗ್ರಾಮಾಂತರ ಭಾಗಗಳಿಗೆ ಮಾವು ಖರೀದಿದಾರರು ಬರುವಂತೆ ಅವಕಾಶ ಕಲ್ಪಿಸಿ’ ಎಂದರು.
ಅವಕಾಶ ಕಲ್ಪಿಸಲಾಗುವುದು: ಅಹವಾಲು ಆಲಿಸಿದ ತಹಸೀಲ್ದಾರ್ ವಿದ್ಯಾಧರ ಗುಳಗುಳೆ, ‘ಎಪಿಎಂಸಿ, ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆಯವರು ಸೇರಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ದೃಷ್ಟಿಯಿಂದ ಹಾಗೂ ಲಾಕ್ ಡೌನ್ ನಿಯಮ ಉಲ್ಲಂಘನೆ ಆಗದಂತೆ ಮಾರ್ಗಸೂಚಿಯನ್ನು ರೂಪಿಸುತ್ತೇವೆ. ಗ್ರಾಮಾಂತರ ಭಾಗದಲ್ಲಿ ಬೆಳೆದ ಮಾವು ಮಾರಾಟ ಮಾಡಲು ಸಮಯವನ್ನು ನಿಗದಿ ಪಡಿಸಲಾಗುವುದು. ಹಾಗೆಯೇ ಖರೀದಿಸಿದ ಮಾವನ್ನು ಬೇರೆ ಜಿಲ್ಲೆಗಳಿಗೂ ಕಳಿಸಲು ಅವಕಾಶವನ್ನು ನೀಡಲಾಗುವುದು’ ಎಂದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎ.ಆರ್.ಗಿರಿಯಾಲ, ಎಪಿಎಂಸಿ ಕಾರ್ಯದರ್ಶಿ ಸುಮಿತ್ರಾ ಹಾವಣ್ಣನವರ, ಮಾವು ಖರೀದಿದಾರ ಅಬ್ದುಲ್ ರಹೀಂ ದಲಾಲ್, ಹಪೀಜ್ ಅಂಕೋಲೆಕರ, ರಹೆಮತ್ ಉಲ್ಲಾ ಶೇಖ್, ಹುಬ್ಬಳ್ಳಿಯ ಎಕ್ಸೆಲ್ ಫುಡ್ ಕಂಪನಿಯ ರಾಘವೆಂದ್ರ ಎಸ್.ಜೆ. ಉಪಸ್ಥಿತರಿದ್ದರು.
ಶೇ 60 ಇಳುವರಿ ಕುಂಠಿತ: ಹಳಿಯಾಳ ತಾಲೂಕಿನಲ್ಲಿ ಕಳೆದ ವರ್ಷವಿದ್ದ ಮಾವಿನ ಬೆಳೆಯ ಕ್ಷೇತ್ರ 600 ಹೆಕ್ಟರ್ನಿಂದ ಈ ಬಾರಿ 700 ಹೆಕ್ಟರ್ ಪ್ರದೇಶಕ್ಕೆ ವಿಸ್ತರಣೆಯಾಗಿದೆ. ಕಳೆದ ವರ್ಷ 987ಕ್ವಿಂಟಾಲ್ ಮಾವು ಮಾರಾಟವಾಗಿತ್ತು. ಅತೀ ಹೆಚ್ಚ ದರ ಕ್ವಿಂಟಾಲ್ಗೆ 1900 ರೂ., ಕಡಿಮೆ ದರ 1800 ರೂ. ಹಾಗೂ ಮಾದರಿ ದರ 2000 ರೂ. ಇತ್ತು. ತೋಟಗಾರಿಕೆ ಇಲಾಖೆಯ ಮಾಹಿತಿಯಂತೆ ತಾಲೂಕಿನಲ್ಲಿ ಪ್ರತಿ ಹೆಕ್ಟರ್ಗೆ ಅಂದಾಜು 10 ರಿಂದ 30 ಟನ್ ಮಾವಿನ ಇಳುವರಿ ಬರುತ್ತಿತ್ತು. ಆದರೆ, ಈ ವರ್ಷ 6ರಿಂದ 7 ಟನ್ಗೆ ಇಳುವರಿ ಪ್ರಮಾಣ ಕುಸಿದಿದ್ದು, ಈ ವರ್ಷ ಕೇವಲ 40% ಮಾತ್ರ ಮಾವಿನ ಬೆಳೆ ಬರಲಿದೆ. ಅಂದಾಜು 5000 ಟನ್ ಮಾವು ಬೆಳೆ ದೊರೆಯುವ ಸಾಧ್ಯತೆಗಳಿವೆ ಎಂದು ಹಳಿಯಾಳ ಎಪಿಎಂಸಿ ಮಾಹಿತಿ ನೀಡಿದೆ.</