ಚಿತ್ರದುರ್ಗ: ಕೇಂದ್ರ ಸರ್ಕಾರದ ಅನುದಾನ ಹಂಚಿಕೆಗೆ 15ನೇ ಕೇಂದ್ರ ಹಣಕಾಸು ಆಯೋಗ ಅಳವಡಿಸಿಕೊಂಡಿದ್ದ ಮಾರ್ಗಸೂಚಿಗಳ ಪರಿಷ್ಕರಣೆಗೆ 16ನೇ ಆಯೋಗಕ್ಕೆ ಶಿಫಾರಸ್ಸು ಮಾಡುವುದಾಗಿ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ. ನಾರಾಯಣಸ್ವಾಮಿ ಹೇಳಿದರು.
ಚಿತ್ರದುರ್ಗ ನಗರಸಭೆಯಲ್ಲಿ ಮಂಗಳವಾರ ನಗರಸಭೆ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆ ಆಯೋಗದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಜನಸಂಖ್ಯೆ ಹಾಗೂ ಭೌಗೋಳಿಕ ಪ್ರದೇಶದ ಮಾನದಂಡವನ್ನಾಧರಿಸಿ 15ನೇ ಹಣಕಾಸು ಆಯೋಗ, ಕೇಂದ್ರದ ಅನುದಾನ ಹಂಚಿಕೆಗೆ ಶಿಫಾರಸ್ಸು ಮಾಡಿದೆ. ಇದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಕಡಿಮೆ ಅನುದಾನ ಲಭಿಸಿದೆ ಎಂದರು.
ಕೇಂದ್ರದ ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮಗಳು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ. ಇದರಿಂದ ಜನಸಂಖ್ಯೆ ಬೆಳವಣಿಗೆ ದರ ಉತ್ತರದ ರಾಜ್ಯಗಳಿಗೆ ಹೊಲಿಸಿದರೆ ನಿಯಂತ್ರಣದಲ್ಲಿದೆ. ಭೌಗೋಳಿಕ ವಿಸ್ತೀರ್ಣದಿಂದಾಗಿ ನಮ್ಮ ರಾಜ್ಯಕ್ಕೆ ಕಡಿಮೆ ಅನುದಾನ ಲಭಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಕೇಂದ್ರಕ್ಕೆ ರಾಜ್ಯದಿಂದ ಹೆಚ್ಚಿನ ತೆರಿಗೆ ಸಲ್ಲಿಕೆಯಾಗುತ್ತ್ತಿದೆ. ಆದ್ದರಿಂದ ಅನುದಾನ ಹಂಚಿಕೆ ತಾರತಮ್ಯ ಸರಿಪಡಿಸಿ, ರಾಜ್ಯ ತೆರಿಗೆ ಸಂಗ್ರಹಣೆಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾರ್ಗಸೂಚಿಗಳನ್ನು ರಚಿಸಲು ಹಾಗೂ ಸ್ಥಳೀಯ ಸಂಸ್ಥೆಗಳ ಅನುದಾನ ಹೆಚ್ಚಳಕ್ಕೆ ಕೇಂದ್ರ ಹಣಕಾಸು ಆಯೋಗಕ್ಕೆ ಮನವಿ ಮಾಡುವುದಾಗಿ ಹೇಳಿದರು.
ನಗರ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಆದಾಯದ ಸಮರ್ಪಕ ಹಂಚಿಕೆಗೆ ನಮ್ಮ ಆಯೋಗ ಶಿಫಾರಸು ಮಾಡುತ್ತದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸಹಿತ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಪಂಗಳಿಗೆ ಮಾತ್ರ ತೆರಿಗೆ ವಿಧಿಸುವ ಹಕ್ಕಿದೆ. ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸ್ವಾವಲಂಬಿಯಾದರೆ ಪ್ರಗತಿ ಸಾಧ್ಯವಾಗುತ್ತದೆ ಎಂದರು.
ಆಯೋಗ 2024ರ ಫೆಬ್ರವರಿಯಲ್ಲಿ ಸಲ್ಲಿಸಿರುವ ಮಧ್ಯಂತರ ವರದಿ ಶಿಫಾರಸ್ಸನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಿದೆ. ಕೇಂದ್ರ ಹಣಕಾಸು ಆಯೋಗದ ನಿಬಂಧನೆಗಳಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಕಾಲ, ಕಾಲಕ್ಕೆ ಚುನಾವಣೆ ನಡೆಸಬೇಕು. ರಾಜ್ಯದಲ್ಲಿ ತಾಪಂ ಹಾಗೂ ಜಿಪಂ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳು ನಡೆಯದ ಕಾರಣ ರಾಜ್ಯಕ್ಕೆ ಲಭಿಸಬೇಕಿದ್ದ 2100 ಕೋಟಿ ರೂ.ಅನುದಾನವನ್ನು ಕೇಂದ್ರ ಹಣಕಾಸು ಆಯೋಗ ತಡೆ ಹಿಡಿದಿದೆ ಎಂದರು.
2026ರ ಮಾರ್ಚ್ ಅಂತ್ಯಕ್ಕೆ 15ನೇ ಕೇಂದ್ರ ಹಣಕಾಸು ಆಯೋಗದ ಅವಧಿ ಮುಕ್ತಾಯವಾಗಲಿದೆ. ಇದರ ಒಳಗಾಗಿ ಈ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದರೆ, ತಡೆ ಹಿಡಿದ 2100 ಕೋಟಿ ರೂ. ಅನುದಾನ ಲಭ್ಯವಾಗಲಿದೆ. ಜೂನ್‌ವೊಳಗೆ ನಮ್ಮ ಆಯೋಗ ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಿದೆ ಎಂದು ನಾರಾಯಣಸ್ವಾಮಿ ಹೇಳಿದರು.
ನಗರಸಭೆ ಅಧ್ಯಕ್ಷೆ ಬಿ.ಎನ್. ಸುಮಿತಾ ಮಾತನಾಡಿ,ಪೌರಕಾರ್ಮಿಕರ ವೇತನ, ಅಭಿವೃದ್ಧಿಗೆ ತೆರಿಗೆ ಹಣದಿಂದ ಭರಿಸಲಾಗುತ್ತಿದೆ. ಆದ್ದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನದ ಅಗತ್ಯವಿದೆ. ಶಾಂತಿಸಾಗರದಿಂದ ನೀರು ಸರಬರಾಜಿಗೆ ಹೊಸ ಪೈಪ್‌ಲೈನ್ ಅಳವಡಿಕೆಗೆ ಅನುದಾನ ಬೇಕಿದೆ ಎಂದರು.
ಉಪಾಧ್ಯಕ್ಷೆ ಶ್ರೀದೇವಿ ಮಾತನಾಡಿ, ನಗರದ 33ನೇ ವಾರ್ಡ್‌ನಲ್ಲಿ ಮಳೆ ಬಂದರೆ ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿದೆ. ದೊಡ್ಡ ಚರಂಡಿಗಳ ನಿರ್ಮಾಣ ಮಾಡಬೇಕಾಗಿದೆ ಎಂದು ತಿಳಿಸಿದರು.
ಹರೀಶ್ ಮಾತನಾಡಿ, ನಗರಸಭೆ ವ್ಯಾಪ್ತಿಗೆ ಮದಕರಿಪುರ, ಚೋಳಘಟ್ಟ ಸೇರಿ ಐದಾರು ಗ್ರಾಪಂಗಳು ಸೇರ್ಪಡೆಯಾಗುತ್ತಿವೆ. ಆದ್ದರಿಂದ ಖಾಲಿ ಹುದ್ದೆ ಭರ್ತಿ ಮತ್ತು ಹೆಚ್ಚಿನ ಸಿಬ್ಬಂದಿ ನೇಮಕವಾಗಬೇಕಿದೆ ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸರುಲ್ಲಾ ಮಾತನಾಡಿ, ನಗರಸಭೆ ಚುನಾಯಿತ ಪ್ರತಿನಿಧಿಗಳ ಗೌರವಧನ ಹೆಚ್ಚಿಸುವಂತೆ ಮನವಿ ಮಾಡಿದರು.
ಐತಿಹಾಸಿಕ ನಗರದ ರಸ್ತೆಗಳು ಚಿಕ್ಕದಾಗಿವೆ. ಅವುಗಳ ವಿಸ್ತರಣೆಯೊಂದಿಗೆ ನಗರದ ಅಭಿವೃದ್ಧಿಯಾಗಬೇಕಿದೆ ಎಂದರು.
ಅಗತ್ಯ ಅನುದಾನ ಕೋರಿ ಆಯೋಗದ ಅಧ್ಯಕ್ಷರಿಗೆ ನಗರಸಭೆಯಿಂದ ಮನವಿ ಸಲ್ಲಿಸಲಾಯಿತು.
ಆಯೋಗದ ಸದಸ್ಯರಾದ ಮೊಹಮದ್ ಸನಾವುಲ್ಲಾ, ಆರ್.ಎಸ್. ಪೋಂಡೆ, ಸಮಾಲೋಚಕರಾದ ಕೆಂಪೇಗೌಡ, ಸಿ.ಜಿ. ಸುಪ್ರಸನ್ನ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಯಾಲಕ್ಕಿಗೌಡ, ಜಿಪಂ ಸಿಇಓ ಎಸ್.ಜೆ. ಸೋಮಶೇಖರ್,ಪೌರಾಯುಕ್ತೆ ಎಂ. ರೇಣುಕಾ ಮತ್ತಿತರರು ಇದ್ದರು.
ಖಾಲಿ ಹುದ್ದೆಗಳ ಭರ್ತಿಗೆ ಮನವಿ
ಚಿತ್ರದುರ್ಗ ನಗರದಲ್ಲಿ ಎರಡು ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದೆ. ನಗರಸಭೆಯಲ್ಲಿ ಪೌರಕಾರ್ಮಿಕರು, ತಾಂತ್ರಿಕ ಹುದ್ದೆಗಳು ಸೇರಿ ಖಾಲಿ ಇರುವ ವಿವಿಧ ಹುದ್ದೆಗಳು ಭರ್ತಿ ಅಗತ್ಯವಿದೆ. ಚಿತ್ರದುರ್ಗದ ಕುಡಿಯುವ ನೀರು ನಿರ್ವಹಣೆ ಹಾಗೂ ನಗರ ಒಳ ಚರಂಡಿ ವ್ಯವಸ್ಥೆಗೆ ವಿಶೇಷ ಪ್ಯಾಕೇಜ್ ಬಿಡುಗಡೆಗೆ ಆಯೋಗ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡುವೆ.
ಟಿ. ವೆಂಕಟೇಶ್, ಜಿಲ್ಲಾಧಿಕಾರಿ, ಚಿತ್ರದುರ್ಗ
-----