ನೆಲಮಂಗಲ: ಕರೊನಾ ಮಾರ್ಗಸೂಚಿ ಉಲ್ಲಂಸಿದವರ ವಿರುದ್ಧ ಎ್ಐಆರ್ ದಾಖಲಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಅರುಳ್‌ಕುಮಾರ್ ಎಚ್ಚರಿಕೆ ನೀಡಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಕರೊನಾ 2ನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸರ್ಕಾರದ ವಿವಿಧ ಇಲಾಖೆಗಳ ತಾಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ನಿತ್ಯ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಮುಂಜಾಗ್ರತೆ ಜತೆಗೆ ಮಾರ್ಗಸೂಚಿ ನಿಯಮ ಕಟ್ಟುನಿಟ್ಟಾಗಿ ಅನುಸರಿಸಬೇಕು. ಜಿಲ್ಲೆಯಾದ್ಯಂತ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೆಲ ಸಮಾರಂಭಗಳು, ವಿವಾಹ ಕಾರ್ಯಗಳಿಗೆ ತಾಲೂಕು ಆಡಳಿತದ ಅನುಮತಿ ಜತೆಗೆ ಪಾಸ್ ಪಡೆಯುವುದು ಕಡ್ಡಾಯವಾಗಿದೆ. ಸಾರ್ವಜನಿಕರು ಕಡ್ಡಾಯವಾಗಿ ನಿಯಮ ಪಾಲಿಸಬೇಕು. ಇಲ್ಲವಾದಲ್ಲಿ ದಂಡದ ಜತೆಗೆ 3 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಶೇಷ ತಂಡ ರಚನೆ: ಆರೋಗ್ಯ ಇಲಾಖೆ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರಸಭೆ ಕಂದಾಯ ಅಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡ ರಚಿಸಿಕೊಂಡು ಕರೊನಾ ಪರಿಸ್ಥಿತಿಯನ್ನು ನಿಭಾಯಿಸಬೇಕಿದೆ. ತಾಲೂಕಿನಾದ್ಯಂತ 21 ಗ್ರಾಮಪಂಚಾಯಿತಿ ಹಾಗೂ ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಿಗೆ ವಿಶೇಷ ತಂಡ ರಚಿಸಿ ಪ್ರತಿಯೊಂದು ಮನೆಗೆ ಭೇಟಿ ನೀಡಿ 65 ಹಾಗೂ 45 ವರ್ಷ ಮೇಲ್ಪಟ್ಟವರ ಪಟ್ಟಿ ಮಾಡಿ ಕಡ್ಡಾಯವಾಗಿ ಕರೊನಾ ಲಸಿಕೆ ಕೊಡಿಸಬೇಕು ಎಂದು ಉಪವಿಭಾಗಾಧಿಕಾರಿ ಅರುಳ್‌ಕುಮಾರ್ ಸೂಚಿಸಿದರು.
500 ಹಾಸಿಗೆಗಳ ವ್ಯವಸ್ಥೆ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 32 ಹಾಸಿಗೆ ಹಾಗೂ 3 ಐಸಿಯು ಹಾಸಿಗೆ ಇದ್ದು ಸಂಪೂರ್ಣ ಭರ್ತಿಯಾಗಿವೆ. ನಗರದ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯ, ಬಿಸಿಎಂ ಹಾಸ್ಟೆಲ್, ತ್ಯಾಮಗೊಂಡ್ಲು ಪ್ರಾಥಮಿಕ ಆರೋಗ್ಯ ಕೇಂದ್ರ, ಟಿ. ಬೇಗೂರು ಬಳಿಯ ಸಿದ್ಧಾರ್ಥ ಮೆಡಿಕಲ್ ಕಾಲೇಜು, ವಾಜರಹಳ್ಳಿ ಸರ್ಕಾರಿ ವಿದ್ಯಾರ್ಥಿ ನಿಲಯ ಸೇರಿ ತಾಲೂಕಿನಾದ್ಯಂತ ಒಟ್ಟು 500ಕ್ಕೂ ಹೆಚ್ಚು ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಪಿ. ಹರೀಶ್ ಮಾಹಿತಿ ನೀಡಿದರು.
ತಹಸೀಲ್ದಾರ್ ಕೆ. ಮಂಜುನಾಥ್, ಶಿರಸ್ತೇದಾರ್ ಶ್ರೀನಿವಾಸ್‌ಮೂರ್ತಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್, ಸಹಾಯಕ ನಿರ್ದೇಶಕ ಪದ್ಮನಾಭ್, ತಾಲೂಕು ಆರೋಗ್ಯಾಧಿಕಾರಿ ಹರೀಶ್, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ನರಸಿಂಹಯ್ಯ, ಕೇತ್ರ ಸಮನ್ವಯಾಧಿಕಾರಿ ನರಸಿಂಹಯ್ಯ, ರಾಜಸ್ವ ನೀರಿಕ್ಷಕ ಸುದೀಪ್, ನಗರಸಭೆ ಕಂದಾಯ ಅಧಿಕಾರಿ ಸವಿತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮೇಲ್ವಿಚಾರಕಿ ಪುಷ್ಪ ಮತ್ತಿತತರು ಇದ್ದರು.
ಕರೊನಾಕ್ಕೆ ಮಹಿಳೆ ಬಲಿ: ನಗರಸಭೆ ವ್ಯಾಪ್ತಿಯ ಅರಿಶಿಣಕುಂಟೆ ಗ್ರಾಮದ 58 ವರ್ಷದ ಮಹಿಳೆಯೊಬ್ಬರು ಕರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಮೂರ‌್ನಾಲ್ಕು ದಿನಗಳಿಂದ ಜ್ವರ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಸೋಮವಾರ ರಾತ್ರಿ ಮೃತಪಟ್ಟರು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 3 ವೆಂಟಿಲೇಟರ್ ಹಾಸಿಗೆಗಳು ಭರ್ತಿಯಾಗಿದ್ದ ಕಾರಣ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಮಾರ್ಗ ಮಧ್ಯೆ ಅವರು ಮೃತಪಟ್ಟರು ಎನ್ನಲಾಗಿದೆ.