ಚಿಕ್ಕಬಳ್ಳಾಪುರ: ಸ್ವಾರ್ಥ, ಪ್ರತಿಷ್ಠೆ ಮತ್ತು ಏಕ ಪರಮಾಧಿಕಾರ ಗಳಿಕೆಯ ಭಾವನೆಯಲ್ಲಿ ನಾನಾ ಧರ್ಮಗಳನ್ನು ಒಡೆಯಲಾಗುತ್ತಿದೆ. ಸಮುದಾಯಗಳು ಚೂರು ಚೂರುಗಳಾಗಿ ವಿಭಜನೆಗಳಾಗುತ್ತಿರುವುದರ ನಡುವೆ ಮಹನೀಯರ ಏಕತ್ವ ಸಂದೇಶದಂತೆ ಉತ್ತಮ ಮಾರ್ಗದರ್ಶಿ ಸಮಾಜ ನಿರ್ಮಿಸಬೇಕಾಗಿದೆ ಎಂದು ಕೈವಾರ ಯೋಗಿ ನಾರೇಯಣ ಮಠದ ಧರ್ಮಾಧಿಕಾರಿ ಶ್ರೀ ಎಂ.ಆರ್.ಜಯರಾಮ್ ಕರೆ ನೀಡಿದರು.
ನಗರದ ನಂದಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾನುವಾರ ಹಮ್ಮಿಕೊಂಡಿದ್ದ ಕೈವಾರ ತಾತಯ್ಯನವರ ಜಯಂತಿಯಲ್ಲಿ ಮಾತನಾಡಿ, ತಾತಯ್ಯ, ಕನಕದಾಸರು, ಬಸವಣ್ಣ ಸೇರಿ ಅನೇಕ ಮಹನೀಯರು ಜಾತಿ, ಕುಲದ ಹೊಡೆದಾಟ ಪ್ರಶ್ನಿಸಿ, ಎಲ್ಲರೂ ಪರಸ್ಪರ ಭೇದವಿಲ್ಲದೆ ಸಮಾನತೆಯಿಂದ ಜೀವನ ನಡೆಸಬೇಕೆಂಬ ಸಂದೇಶ ನೀಡಿದ್ದಾರೆ. ಆತ್ಮ, ಪರಮಾತ್ಮನಿಗೆ ಎಲ್ಲಿದೆ ಕುಲ?. ಆದರೂ ಪ್ರತಿಯೊಂದು ಊರಿನಲ್ಲೂ ಹತ್ತಾರು ಜಾತಿಗಳಿಂದ ವಿಭಜಿಸಲಾಗುತ್ತಿದೆ. ಇದು ಸರಿಯಲ್ಲ. ಕುಲಗೋತ್ರಗಳಲ್ಲಿ ಒಡಕು ಸೃಷ್ಟಿಸುತ್ತಿರುವವರ ಜತೆ ಸೇರಬಾರದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಕರುಣೆ ತುಂಬಿದ ಹೃದಯವೇ ನಿಜವಾದ ದೇವಾಲಯ. ಇದಕ್ಕೆ ದಯೆ ಇಲ್ಲದ ಧರ್ಮ ಯಾವುದಯ್ಯ, ದಯೆಯೇ ಧರ್ಮದ ಮೂಲವಯ್ಯ ಎಂಬುದಾಗಿ ಹೇಳಲಾಗುತ್ತದೆ. ಇಲ್ಲಿ ಯಾರೂ ಶಾಶ್ವತವಾಗಿ ಇರುವುದಿಲ್ಲ. ಸತ್ತ ಮೇಲೆ ಏನನ್ನು ತೆಗೆದುಕೊಂಡು ಹೋಗುವುದಿಲ್ಲ.ಹುಟ್ಟು ಸಾವಿನ ನಡುವಿನ ಬದುಕಿನಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವುದು ಮುಖ್ಯ. ತಂದೆ-ತಾಯಿ, ಗುರು ಮತ್ತು ಸಮಾಜದ ಋಣ ತೀರಿಸಬೆಕು. ಇದು ಪ್ರೀತಿ ನೀತಿ ಹೊಂದಿರುವವರಲ್ಲಿ ಮಾತ್ರ ನಿರೀಕ್ಷಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್, ಜಿಲ್ಲಾಧಿಕಾರಿ ಆರ್.ಲತಾ, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಜಿಪಂ ಸಿಇಒ ಪಿ.ಶಿವಶಂಕರ್, ಮಾಜಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದ್‌ರೆಡ್ಡಿ, ಮುಖಂಡರಾದ ಬಾಲಕೃಷ್ಣ ಭಾಗವತರ್, ಪ್ರದೀಪ್ ಈಶ್ವರ್, ಜಿ.ವಿ.ಮಂಜುನಾಥ್, ಕೃಷ್ಣಯ್ಯ, ಎಂ.ರಾಮಲಿಂಗಪ್ಪ ಮತ್ತಿತರರು ಇದ್ದರು.
ಸರ್ಕಾರಕ್ಕೆ ಸಮುದಾಯದ ಮನವಿ: ಬಲಿಜ ಭವನ ನಿರ್ಮಾಣಕ್ಕೆ ಸೂಕ್ತ ಜಾಗ, ವಸತಿ ನಿಲಯಕ್ಕೆ ಆರ್ಥಿಕ ನೆರವು, ಬೆಂಗಳೂರು ವಿವಿಯಲ್ಲಿ ಕೈವಾರ ತಾತಯ್ಯ ಅಧ್ಯಯನ ಪೀಠ ಸ್ಥಾಪನೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಸೇರಿ ಸಮುದಾಯ ಬೇಡಿಕೆಗಳ ಮನವಿ ಪತ್ರವನ್ನು ಮುಖಂಡ ಕೆ.ವಿ.ನವೀನ್ ಕಿರಣ್ ಸಚಿವರಿಗೆ ಸಲ್ಲಿಸಿದರು.
ತಿಂಗಳೊಳಗೆ ಎರಡು ಎಕರೆ ಜಾಗ: ಜಿಲ್ಲೆಯಲ್ಲಿ ಬಲಿಜ ಭವನ ನಿರ್ಮಾಣಕ್ಕೆ ತಿಂಗಳೊಳಗೆ 2 ಎಕರೆ ಜಾಗ ಕೊಡಿಸಲಾಗುವುದು. ಎಲ್ಲರ ಒತ್ತಡದ ಹಿನ್ನೆಲೆಯಲ್ಲಿ ತಾತಯ್ಯನವರ ಜಯಂತಿಯನ್ನು ರಾಜ್ಯ ಸರ್ಕಾರವು ಸರ್ಕಾರಿ ಕಾರ್ಯಕ್ರಮವನ್ನಾಗಿ ಘೋಷಿಸಿದೆ. ಮುಂದಿನ ವರ್ಷ ಸಮುದಾಯದ ಒತ್ತಾಯದಂತೆ ಫಲ್ಗುಣ ಮಾಸದ ಕದಿರಿ ಹುಣ್ಣಿಮೆ ದಿನ ಜಯಂತಿ ಆಚರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲಾ ಕೇಂದ್ರದಲ್ಲಿ ಬಲಿಜ ಜನಾಂಗದ ವಿದ್ಯಾನಿಲಯಕ್ಕೆ ವೈಯಕ್ತಿಕ ಮತ್ತು ಸರ್ಕಾರದಿಂದ ಅಗತ್ಯ ಆರ್ಥಿಕ ನೆರವು ನೀಡಲಾಗುವುದು. ಹಾಗೆಯೇ ರಾಜಕೀಯ ಪ್ರಾತಿನಿಧ್ಯ ಶಕ್ತಿಗಾಗಿ ಸಮುದಾಯದ ಅರ್ಹರಿಗೆ ಸರ್ಕಾರದಲ್ಲಿ ಒಳ್ಳೆಯ ಸ್ಥಾನಮಾನ ಸಿಗಲಿದೆ ಎಂದು ಸಚಿವ ಡಾ ಕೆ.ಸುಧಾಕರ್ ಭರವಸೆ ನೀಡಿದರು. ಕೈವಾರ ತಾತಯ್ಯ ಎಲ್ಲ ವರ್ಗದ ಮಹನೀಯರು. ಇದನ್ನರಿತು ಎಲ್ಲರೂ ಒಗ್ಗಟ್ಟಿನಿಂದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಅದ್ದೂರಿ ಉತ್ಸವ: ನಗರದ ಎಂ.ಜಿ.ರಸ್ತೆಯಲ್ಲಿರುವ ಮರಳು ಸಿದ್ದೇಶ್ವರ ವೃತ್ತದಲ್ಲಿ ಸಂಸದ ಪಿ.ಸಿ.ಮೋಹನ್ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಿದರು. ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಬೆಳ್ಳಿ ರಥ, ಹೂವಿನ ಪಲ್ಲಕ್ಕಿಗಳಲ್ಲಿ ತಾತಯ್ಯನವರ ಭಾವಚಿತ್ರವನ್ನು ಕಲಶ ಹೊತ್ತ ಸುಮಂಗಲೆಯರು, ನಾನಾ ಕಲಾ ತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಸಮುದಾಯದ ಜನಪ್ರತಿನಿಧಿಗಳು ಮತ್ತು ನಾಯಕರು ಕಾಲ್ನಡಿಗೆಯಲ್ಲಿ ಜನರೊಂದಿಗೆ ಸಾಗಿದರು.
ಸುಧಾಕರ್ ಪರ ಬ್ಯಾಟ್ ಬೀಸಿದ ಎಂಟಿಬಿ: ಕಾರ್ಯಕ್ರಮದಲ್ಲಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಪ್ರಸ್ತಾಪಿಸುತ್ತ ಸಚಿವ ಡಾ ಕೆ.ಸುಧಾಕರ್ ಪರ ಸಚಿವ ಎಂಟಿಬಿ ನಾಗರಾಜ್ ಬ್ಯಾಟ್ ಬೀಸಿದರು. ಈ ಭಾಗಕ್ಕೆ ಹಿಂದಿನ ಎಲ್ಲ ನಾಯಕರ ಅವಧಿಗಿಂತಲೂ ಸುಧಾಕರ್ ಅವಧಿಯಲ್ಲಿ ಸಿಕ್ಕ ಕೊಡುಗೆಗಳೇ ಹೆಚ್ಚು. ಮೆಡಿಕಲ್ ಕಾಲೇಜು, 300 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ರಸ್ತೆ, ಸರ್ಕಾರಿ ಕಚೇರಿ ಕಟ್ಟಡಗಳ ನಿರ್ಮಾಣ ಸೇರಿ ಹಲವು ನಿದರ್ಶನ. ಇದಕ್ಕೆ ಸತತವಾಗಿ 3 ಬಾರಿ ಆಯ್ಕೆಯಾಗಿದ್ದು, ಇದಕ್ಕೆ ಎಲ್ಲ ಸಮುದಾಯದ ಬೆಂಬಲವೇ ಪ್ರಮುಖ ಕಾರಣ ಎಂದರು.