ಚಿತ್ರದುರ್ಗ: ನೇಕಾರ ಪದ್ಮಶಾಲಿ ಸಮಾಜದ ಕುಲದೇವರಾದ ಮಾರ್ಕಂಡೇಶ್ವರ ಸ್ವಾಮಿ ಜಯಂತ್ಯುತ್ಸವ ಅಂಗವಾಗಿ ಸ್ವಾಮಿಯ ಭಾವಚಿತ್ರ ಮೆರವಣಿಗೆ ನಗರದಲ್ಲಿ ಅದ್ದೂರಿಯಾಗಿ ಜರುಗಿತು. ನೂರಾರು ಭಕ್ತರು, ಸಮುದಾಯದವರು ಇದಕ್ಕೆ ಸಾಕ್ಷಿಯಾದರು.
ಪದ್ಮಶಾಲಿ ಬಹುತ್ತಮ ಸಮಾಜ, ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟ, ಪದ್ಮಶಾಲಿ ಯುವಕ ಸಂಘ, ಪದ್ಮಶಾಲಿ ಮಹಿಳಾ ಸಂಘದಿಂದ ಭಾನುವಾರ ಆಯೋಜಿಸಿದ್ದ ಮೆರವಣಿಗೆಗೆ ನೀಲಕಂಠೇಶ್ವರ ಸ್ವಾಮಿ ದೇಗುಲ ಮುಂಭಾಗ ಚಾಲನೆ ದೊರೆಯಿತು.
ಅಲ್ಲಿಂದ ಹೊರಟು ಗಾಂಧಿ, ಎಸ್‌ಬಿಐ ವೃತ್ತ, ಬಿ.ಡಿ.ರಸ್ತೆ, ಪ್ರವಾಸಿ ಮಂದಿರ, ಒನಕೆ ಓಬವ್ವ ವೃತ್ತದ ಮಾರ್ಗವಾಗಿ ಸಂಚರಿಸಿ ಕಣಿವೆಮಾರಮ್ಮ ದೇಗುಲ ತಲುಪುವ ಮೂಲಕ ಮುಕ್ತಾಯಗೊಂಡಿತು.
ಜನಪದ ಕಲಾತಂಡ ಸೇರಿ ಮಂಗಳವಾದ್ಯಗಳು ಮೆರುಗು ನೀಡಿದವು. ಪೂರ್ಣಕುಂಭ ಹೊತ್ತವರು ಗಮನ ಸೆಳೆದರು. ನೂರಾರು ಮಹಿಳೆಯರು ಸೇರಿ ಸಮುದಾಯದ ಹಲವರು ಉತ್ಸಾಹದಿಂದ ಹೆಜ್ಜೆ ಹಾಕಿದರು.
ಜಿಲ್ಲಾ ನೇಕಾರರ ಸಮುದಾಯ ಒಕ್ಕೂಟದ ಅಧ್ಯಕ್ಷ ಬಿ.ಮಂಜುನಾಥ, ಪದ್ಮಶಾಲಿ ಬಹುತ್ತಮ ಸಮಾಜದ ಅಧ್ಯಕ್ಷ ಬುದಾರ್ಪು ತಿಮ್ಮಪ್ಪ, ಕಾರ್ಯದರ್ಶಿ ಸೋಮ, ಜಿ.ಎನ್.ಚಂದ್ರಶೇಖರಪ್ಪ, ಪದ್ಮಶಾಲಿ ಯುವಕ ಸಂಘದ ಅಧ್ಯಕ್ಷ ವಗ್ಗಾದೇವರಾಜ, ಪದ್ಮಶಾಲಿ ಮಹಿಳಾ ಸಂಘದ ಅಧ್ಯಕ್ಷೆ ಶ್ರೀದೇವಿ ಇತರರಿದ್ದರು.