ಸಂತೋಷ ದೇಶಪಾಂಡೆ ಬಾಗಲಕೋಟೆ: ಹಣ್ಣುಗಳ ರಾಜ ಮಾವು' ಎಂದರೇ ಯಾರಿಗೆ ಇಷ್ಟವಾಗಲ್ಲ ಹೇಳಿ.! ಬೇಸಿಗೆ ಬಂದರೇ ಸಾಕು ಚಿಕ್ಕವರಿಂದ ದೊಡ್ಡವರವರೆಗೂ ಪ್ರತಿ ನಿತ್ಯ ಸ್ವಲ್ಪವಾದರು ಬಾಯಿ ಚಪ್ಪರಿಸಲು ಆಸೆ ಪಡುತ್ತಾರೆ. ಈ ವರ್ಷ ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜನ ದರ್ಬಾರ ಜೋರಾಗಿದೆ...!.
ಹಾಗಂತ ಈ ವರ್ಷ ಮಾವು ಸವಿದು ಬೀಡೋನ ಎಂದು ಮಾರುಕಟ್ಟೆಯತ್ತ ಲಗ್ಗೆ ಹಾಕಿದರೇ ಶಾಕ್ ಆಗುವುದು ನಿಶ್ಚಿತ.. ಹಣ್ಣು ರಾಜಮಾವು' ದುಬಾರಿಯಾಗಿದ್ದಾನೆ. ಮಾವು ಹಣ್ಣಿನ ಬೆಲೆ ಕೇಳಿಯೇ ಗ್ರಾಹಕರು ಅಬ್ಬಾಬ್ಬಾ ಎಂದು ಉದ್ಘಾರಿಸುತ್ತಿದ್ದಾರೆ. ಅಲ್ಲದೇ ಸುಸ್ತು ಹೊಡೆಯುತ್ತಿದ್ದಾರೆ. ಅಕ್ಷತ್ರಿತೀಯಾ ಹಬ್ಬಕ್ಕೆ ಮಾವು ತಿಂದು ಸಂತೋಷ ಪಡಬೇಕು ಎಂದು ಆಸೆ ಪಟ್ಟಿದ್ದವರಿಗೆ ಇದೀಗ ನಿರಾಸೆ ಮೂಡಿಸಿದೆ. ಬೇಸಿಗೆ ರಜೆಯಲ್ಲಿ ಮಕ್ಕಳಿಗೆ, ಮನೆಗೆ ಬಂದ ಅತಿಥಿಗಳಿಗೆ ಉಣಬಡಿಸುವ ಕನಸಿಗೆ ತಣ್ಣೀರು ಎರಚಿದಂತಾಗಿದೆ.
ಕಾರಣ ಏನು ?
ಕೋಟೆನಾಡಿಗೆ ಸ್ಥಳೀಯ ಮಾವಿಗ್ಗಿಂತ ಮಹಾರಾಷ್ಟ್ರದ ರತ್ನಗಿರಿ ಆಪುಸ್, ಬೆನಷಾನ್, ಬಾದಾಮಿ, ಬಂಗನ ಪಲ್ಲೆ ತಳಿಗಳಿಗೆ ಬಾರಿ ಬೇಡಿಕೆ ಇದೆ. ಎಪ್ರಿಲ್ ಆರಂಭಿಕ ದಿನಗಳಲ್ಲಿಯೇ ಮಾರುಕಟ್ಟೆಗೆ ಮಾವು ಲಗ್ಗೆ ಇಡುತ್ತಿದ್ದವು. ಈ ವರ್ಷ ಇಳುವರಿಯಲ್ಲಿ ಅಽಕ ಪ್ರಮಾಣದಲ್ಲಿ ಕುಸಿತ ಕಂಡಿದ್ದರಿಂದ ಮಾವು ಆಮದು ಕ್ಷೀಣಿಸಿದೆ. ವಾತಾವರಣದಲ್ಲಿಯಾದ ಏರುಪೇರಿನಿಂದಾಗಿ ಉತ್ಪಾದನೆಯಲ್ಲಿ ತೀವ್ರ ಕುಸಿತವಾಗಿದೆ.
ಪ್ರತಿ ಡಜನ್‌ಗೆ ಆಪುಸ್ ೫೦೦ ರೂ., ಬೆನ್‌ಷಾನ್ ೩೦೦ ರೂಪಾಯಿ ಬೆಲೆ ಇದೆ. ಅಲ್ಪ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದ ಮಾವಿಗೆ ಬೇಡಿಕೆ ಹೆಚ್ಚಿದ್ದರಿಂದ ಬೆಲೆ ಗಗನಕ್ಕೆ ಏರಿದೆ. ಬೆಲೆ ಕೇಳುತ್ತಿದ್ದಂತೆ ಗ್ರಾಹಕರು ಬೇಸ್ತು ಬೀಳುತ್ತಿದ್ದಾರೆ. ಮಾವು ರುಚಿ ನೋಡಲೇ ಬೇಕು ಎಂದರೇ ಇಷ್ಟು ಬೆಲೆ ಕೊಟ್ಟು ಖರೀದಿ ಮಾಡಬೇಕಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಹವಾಮಾನ ಏರುಪೇರಿನ ಬಿಸಿ ಸ್ಥಳೀಯ ಮಾವಿಗೂ ತಟ್ಟಿದೆ. ಹೀಗಾಗಿ ಮಾವು ಹಣ್ಣಿನ ಉತ್ಪಾದನೆಯು ನೆಲೆಕಚ್ಚಿದೆ. ಇಲ್ಲಿನ ಚಂದ್ರಮಾವು, ಸಬ್ಸಸಗಿ ಮಾವು, ಬಾದಾಮಿ, ಮಲ್ಲಿಕಾ, ಕೇಸರ ಇನ್ನು ಮಾರುಕಟ್ಟೆಗೆ ಬಹಳ ಪ್ರಮಾಣದಲ್ಲಿ ಆಮದು ಆಗಿಲ್ಲ. ಸ್ವಲ್ಪ ದಿನಗಳ ನಂತರ ಮಾರುಕಟ್ಟೆಗೆ ಬರುವ ಲಕ್ಷಣಗಳಿವೆ. ಅಲ್ಲದೇ ಧಾರವಾಡ, ಬೆಳಗಾವಿ, ರಾಯಚೂರ, ಗಂಗಾವತಿ, ಕನಕಗಿರಿಯಿಂದ ಮಾವು ಜಿಲ್ಲೆಗೆ ಬಂದಿಲ್ಲ. ಕೆಲ ದಿನಗಳ ಬಳಿಕ ಜಿಲ್ಲೆಗೆ ಆಗಮಿಸುವ ಸಾಧ್ಯತೆಗಳಿವೆ. ಆಮದು ಹೆಚ್ಚಾದ ಬಳಿಕವೇ ಬೆಲೆ ಏರಿಕೆ ತಗ್ಗುವ ಸಾಧ್ಯತೆಗಳಿವೆ. ಅಲ್ಲಿವರೆಗೆ ದುಬಾರಿ ಬೆಲೆ ಕೊಟ್ಟು ಮಾವು ಖರೀದಿ ಮಾಡುವುದು ಅನಿವಾರ್ಯ.