ಜಿಲ್ಲೆ

ಮಾರುಕಟ್ಟೆಗೆ ಬಂದ ವಿವಿಧ ಬಗೆಯ ಗಣೇಶ ಮೂರ್ತಿ:

ಹಾಸನ: ಜಿಲ್ಲೆಯು ಗಣೇಶೋತ್ಸವಕ್ಕೆ ಅಣಿಯಾಗುತ್ತಿದೆ. ಕಲಾವಿದರ ಕೈಚಳಕದಲ್ಲಿ ಮಣ್ಣಿನ ಗಣಪ ಮೈದಳೆಯುತ್ತಿದ್ದಾನೆ. ಸಾರ್ವಜನಿಕ ಗಣೇಶೋತ್ಸವದ ಮಂಟಪಗಳು ಸಿದ್ಧವಾಗುತ್ತಿವೆ.ಮಾರುಕಟ್ಟೆಗೆ ವಿವಿಧ ಬಗೆಯ ಗಣೇಶ ಮೂರ್ತಿಗಳು ಲಗ್ಗೆ ಇಟ್ಟಿವೆ.
ಜಿಲ್ಲಾದ್ಯಂತ ಗಣೇಶ ಚತುರ್ಥಿ ಹಬ್ಬಕ್ಕೆ ತಯಾರಿ ಜೋರಾಗಿದ್ದು, ಗಣಪತಿ ಮೂರ್ತಿಯನ್ನು ಕುರಿಸಲು ಮಂಟಪದ ತಯಾರಿ ಆರಂಭವಾಗಿದೆ. ಮಾರುಕಟ್ಟೆಯಲ್ಲಿ ಅಲಂಕಾರಿಕ ವಸ್ತುಗಳು, ವಿದ್ಯುತ್ ದೀಪಗಳ ಮಾರಾಟ ಆರಂಭವಾಗಿದೆ.ಸಾರ್ವಜನಿಕರು ಹಬ್ಬಕ್ಕಾಗಿ ಈಗಿನಿಂದಲೇ ತಯಾರಿ ಆರಂಭಿಸಿದ್ದರೆ ವ್ಯಾಪಾರಿಗಳು ಮೂರ್ತಿಗಳನ್ನು ಹಬ್ಬಕ್ಕೆ ಒಂದು ವಾರ ಮೊದಲೇ ಮಾರುಕಟ್ಟೆಗೆ ಬಗೆ ಬಗೆಯ ಗಣೇಶ ಮೂರ್ತಿಗಳನ್ನು ತಂದಿದ್ದಾರೆ. ನಗರದ ಮಹಾವೀರ ವೃತ್ತ, ಹೊಸ ಬಸ್ ನಿಲ್ದಾಣ ಎದುರು ಸೇರಿ ಮುಂತಾದ ಕಡೆ ಗಣೇಶ ಮೂರ್ತಿಗಳು ಗಮನ ಸೆಳೆಯುತ್ತಿವೆ.
ರಾಸಾಯನಿಕ ಮಿಶ್ರಿತ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿ ಮಾರಾಟ ಮಾಡದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿರುವ ಹಿನ್ನಲೆ ವ್ಯಾಪಾರಿಗಳು ಎಚ್ಚೆತ್ತುಕೊಂಡಿದ್ದಾರೆ. ರಾಸಾಯನಿಕ ಮಿಶ್ರಿತವಲ್ಲದ ಬಣ್ಣಗಳಿಂದ ಮೂರ್ತಿ ತಯಾರಿಸಿದ್ದು ಮಾರುಕಟ್ಟೆಗೆ ತರುತ್ತಿದ್ದಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗಣೇಶ ಮೂರ್ತಿಗಳ ಬೆಲೆಯಲ್ಲಿ ತುಸು ಏರಿಕೆ ಕಂಡುಬಂದಿದೆ.

ಕೆರೆ ಭರ್ತಿಯಿಂದ ಸಿಗದ ಮಣ್ಣು:
ಗಣೇಶ ಮೂರ್ತಿ ತಯಾರಿಕೆಗೆ ಕೆರೆ ಮಣ್ಣು ಅವಶ್ಯಕವಾಗಿರುತ್ತದೆ. ಹಾಸನ ತಾಲ್ಲೂಕಿನ ಕಂದಲಿ, ಸಾಲಗಾಮೆ ವ್ಯಾಪ್ತಿಯ ಕೆರೆ ಮಣ್ಣು ಗುಣಮಟ್ಟದ್ದಾಗಿರುವುದರಿಂದ ಪ್ರತಿವರ್ಷವೂ ಅಲ್ಲಿಂದಲೇ ತರಿಸಿಕೊಳ್ಳುತ್ತಿದ್ದೆವು. ಆದರೆ ಈ ಬಾರಿ ಬಹುತೇಕ ಕೆರೆಗಳು ಭರ್ತಿಯಾದ ಹಿನ್ನಲೆ ನಮಗೆ ಬೇಕಾದ ಮಣ್ಣು ಸಿಗಲು ಪರದಾಡಬೇಕಾಯಿತು. ಹಿಂದಿನ ವರ್ಷಗಳಲ್ಲಿ ಒಂದು ಲೋಡ್ ಮಣ್ಣಿಗೆ 3 ರಿಂದ 4 ಸಾವಿರ ರೂ. ನೀಡುತ್ತಿದ್ದೆವು. ಆದರೆ ಈ ಸಲ 6 ಸಾವಿರ ರೂ. ಕೊಟ್ಟು ಖರೀದಿಸಿದ್ದೇವೆಂದು ವ್ಯಾಪಾರಿಗಳು ಹೇಳಿದರು.
ನಗರ ವ್ಯಾಪ್ತಿಯ ಕೆರೆ ಮಣ್ಣಿನಲ್ಲಿ ಸತ್ವ ಕಡಿಮೆ. ಪ್ಲಾಸ್ಟಿಕ್, ಕಾರ್ಖಾನೆಗಳ ತ್ಯಾಜ್ಯವೇ ಕೆರೆಗೆ ಸೇರುವುದರಿಂದ ಗ್ರಾಮೀಣ ಪ್ರದೇಶದ ಕೆರೆ ಮಣ್ಣಿಗೆ ಆದ್ಯತೆ ನೀಡಲಾಗುತ್ತದೆ. ಮೂರು ವರ್ಷದಿಂದ ಗಣೇಶ ಮೂರ್ತಿ ತಯಾರಿಸಿ ಮಾರಾಟ ಮಾಡುತ್ತಿದ್ದೇವೆ. ಮಣ್ಣು ಹಾಗು ಕೂಲಿ ಕಾರ್ಮಿಕರ ವೆಚ್ಚ ಹೆಚ್ಚಾಗಿದೆ. ಹಾಗಾಗಿ ಮೂರ್ತಿಗಳ ಬೆಲೆಯಲ್ಲೂ ಏರಿಕೆ ಮಾಡಲಾಗಿದೆ ಎಂದರು.

ವರ್ಷದಿಂದ ಕೆಲಸ:
ಗಣೇಶ ಮೂರ್ತಿ ತಯಾರಿಕೆಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಗೌರಿ ಗಣೇಶ ಹಬ್ಬ ಮುಗಿದ ಮೂರು ತಿಂಗಳು ಮಾತ್ರ ಖಾಲಿ ಇರುತ್ತಾರೆ. ಆ ಬಳಿಕ ಕೆಲಸದಲ್ಲಿ ತೊಡಗುತ್ತಾರೆ. ಡಿಸೈನ್ ಸಿದ್ಧಪಡಿಸುವುದು, ಮಣ್ಣು ಹುಡುಕಾಟ, ಕಾರ್ಮಿಕರ ನಿಯೋಜನೆಯಾಗಿ ಕೆಲಸ ಪ್ರಾರಂಭಿಸಲಾಗುತ್ತದೆ. ಕಾರ್ಮಿಕರು ಕಳೆದ ಎಂಟು ತಿಂಗಳಿಂದ ಗಣೇಶ ಮೂರ್ತಿ ತಯಾರಿಸುತ್ತಾರೆ. ಕೆಲವು ಮೂರ್ತಿಗಳು ಈಗಾಗಲೇ ಮುಂಗಡವಾಗಿ ಬುಕ್ ಮಾಡುತ್ತಾರೆ.

ಬೆಲೆ ಏರಿಕೆ ಖಚಿತ:
ಪಿಒಪಿ ಗಣೇಶ ಮೂರ್ತಿಗೆ ಬೆಲೆ ಕಡಿಮೆ ಇದೆಯಾದರೂ ಅವುಗಳ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಿರುವ ಹಿನ್ನಲೆ ಮಣ್ಣಿನಲ್ಲೇ ತಯಾರಿಸಿರುವ ಮೂರ್ತಿಗಳ ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ಅವುಗಳ ಬೆಲೆಯಲ್ಲಿ ಏರಿಕೆಯಾಗಿದೆ. 5.5 ಅಡಿ ಎತ್ತರದ ಗಣೇಶ ಮೂರ್ತಿಗೆ 25 ಸಾವಿರ ರೂ. ದರ ನಿಗದಿಪಡಿಸಲಾಗಿದೆ. ಹೀಗೆ ಮೂರ್ತಿಗಳ ಎತ್ತರ, ಡಿಸೈನ್ ಆಧರಿಸಿ ಬೆಲೆ ನಿಗದಿಪಡಿಸಲಾಗಿದೆ. ಅರ್ಧ ಅಡಿಯಿಂದ ಹಿಡಿದು 12 ಅಡಿ ಎತ್ತರದ ಗಣೇಶ ಮೂರ್ತಿಗಳನು ನೋಡಬಹುದು 500 ರೂ ನಿಂದ 50 ಸಾವಿರದ ವರೆಗೂ ದರ ನಿಗಧಿ ಮಾಡಲಾಗಿದೆ.

ಆಕರ್ಷಕ ಗಣಪತಿ:
ವರ್ಷದಿಂದ ವರ್ಷಕ್ಕೆ ಗಣೇಶ ಮೂರ್ತಿಗಳು ಆಕರ್ಷಣೆಯ ಕೇಂದ್ರಬಿಂದುವಾಗುತ್ತಿವೆ. ನಗರದ ಹೇಮಾವತಿ ನಗರದಲ್ಲಿ ಪ್ರತಿಷ್ಟಾಪನೆಗಾಗಿ 19 ಅಡಿ ಎತ್ತರದ ಗಣಪತಿ ಮೂರ್ತಿ ತರಲಾಗಿದೆ. ಮಾರುಕಟ್ಟೆಯಲ್ಲೂ 3 ರಿಂದ 12 ಅಡಿ ವರೆಗೆ ಮೂರ್ತಿಗಳಿವೆ. ಆನೆ ಸೊಂಡಿಲಿನಲ್ಲಿ ಕುಳಿತ ಗಣಪ, ಪುಷ್ಪಗಳಲ್ಲಿ ಕುಳಿತ ಗಣಪ, ಬಾಳೆ ಗೊನೆ ಮೇಲೆ ಕುಳಿತ ಗಣಪ ಬಾಲ ಗಣಪ, ಹಂಸದೊಂದಿಗೆ ಗಣೇಶ, ದರ್ಬಾರ್ ಗಣೇಶ ಹಾಗೂ ಗೌರಿ ತೊಡೆ ಮೇಲೆ ಕುಳಿತಿರುವ ಗಣಪ ಸೇರಿ ವಿವಿಧ ಸ್ವರೂಪದ ಮೂರ್ತಿಗಳು ಜನರ ಗಮನ ಸೆಳೆಯುತ್ತಿವೆ. ಇನ್ನು ಮನೆಗಳಲ್ಲಿ ಪ್ರತಿಷ್ಟಾಪಿಸಲು ಸಣ್ಣ ಗಾತ್ರದ ಮಣ್ಣಿನಿಂದ ತಯಾರಾದ ಮೂರ್ತಿಗಳನ್ನು ಮಾರುಕಟ್ಟೆಯಲ್ಲಿ ಕಾಣಬಹುದು.

ತಾತ್ಕಾಲಿಕ ಗುಂಡಿಗಳನ್ನು ನಿರ್ಮಿಸಿರುವ ಸ್ಥಳಗಳು: ವಸ್ತು ಪ್ರದರ್ಶನ ಆವರಣ ಮುಖ್ಯ ಪ್ರವೇಶ ದ್ವಾರದ ಬಳಿ, ಮಹಾರಾಜ ಪಾರ್ಕ್ ಒಳಭಾಗ ಸುಧಾ ಹೋಟೆಲ್ ಎದುರು, ಸಾಲಗಾಮೆ ರಸ್ತೆ ಮಾರ‌್ನಾಮಿ ಮಂಟಪ ಮುಂಭಾಗದಲ್ಲಿ ತಾತ್ಕಾಲಿಕ ಗುಂಡಿಗಳನ್ನು ನಿರ್ಮಿಸಲಾಗಿದೆ

ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಗಣಪತಿ ವಿಗ್ರಹ ಪ್ರತಿಷ್ಟಾಪನೆ ಮತ್ತು ಮಾರಾಟ ಮಾಡಲು ನಗರಸಭೆ ಕಚೇರಿಯಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು. ಗೌರಿ-ಗಣೇಶ ವಿಗ್ರಹಗಳ ವಿಸರ್ಜನೆಗಾಗಿ ತಾತ್ಕಾಲಿಕವಾಗಿ ನಗರಸಭೆಯಿಂದ ನೀರು ತುಂಬಿದ ಟ್ರಾಕ್ಟರ್‌ಗಳ ವ್ಯವಸ್ಥೆ ಮತ್ತು ತಾತ್ಕಾಲಿಕ ಗುಂಡಿಗಳನ್ನು ಕೆಲವು ಸ್ಥಳಗಳಲ್ಲಿ ಮಾಡಲಾಗಿದೆ. ಸಾರ್ವಜನಿಕರು ಗಣಪತಿ ವಿಗ್ರಹಗಳನ್ನು ಟ್ರಾಕ್ಟರ್‌ಗಳಲ್ಲಿ ಹಾಗೂ ತಾತ್ಕಾಲಿಕ ಗುಂಡಿಗಳಲ್ಲಿ ವಿಸರ್ಜಿಸಿ ಜಲಮೂಲಗಳ ಸಂರಕ್ಷಣೆಗೆ ಸಹಕಾರ ನೀಡಬೇಕು.
-ಚಂದ್ರೇಗೌಡ ನಗರಸಭೆ ಅಧ್ಯಕ್ಷರು

ಕಳೆದ 10 ವರ್ಷಗಳಿಂದ ಗಣಪತಿ ಮೂರ್ತಿಗಳನ್ನು ನಿರ್ಮಿಸಿ ಮಾರಾಟ ಮಾಡಲಾಗುತ್ತಿದೆ. ಈ ವರ್ಷ ಕೂಡ ವಿವಿಧ ಬಗೆಯ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಸಾಕಷ್ಟು ಜನರು ಮುಂಗಡವಾಗಿ ಹಣಕೊಟ್ಟು ಬುಕ್ ಮಾಡುತ್ತಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮೂರ್ತಿಗಳನ್ನು ತಯಾರಿಸಲಾಗಿದೆ.

  • ಎಸ್. ಮನೋಜ್ ಗಣಪತಿ ತಯಾರಕರು ಹಾಸನ