ಜಿಲ್ಲೆ

ಮಾರುಕಟ್ಟೆಗೆ ನ್ಯಾಯಾಧೀಶರ ಭೇಟಿ

ಗದಗ: ಕರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ಹೇರಲಾಗಿರುವ ಲಾಕ್​ಡೌನ್ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್. ಸಂಗ್ರೇಶಿ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗೆರೆ ಮಾರುಕಟ್ಟೆ ಸೇರಿ ಮತ್ತಿತರರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ನಗರದ ತರಕಾರಿ, ಕಿರಾಣಿ ಮಾರ್ಕೆಟ್​ಗಳಲ್ಲಿ ಜನಜಂಗುಳಿ ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಕುರಿತು ವೀಕ್ಷಿಸಿದರು. ಅಲ್ಲದೇ, ಹೆಚ್ಚು ದರದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಕಾನೂನು ಉಲ್ಲಂಘಿಸಿದರೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಜನರಿಗೆ ಎಚ್ಚರಿಕೆಯ ಕಿವಿಮಾತು ಹೇಳಿದರು.

ಬೆಟಗೇರಿಯ ಹಾಕಿ ಸ್ಟೇಡಿಯಂ ಬಳಿ ಇರುವ ಹರಿಣಶಿಕಾರಿ ಕಾಲನಿಗೆ ಭೇಟಿ ನೀಡಿದ ನ್ಯಾಯಾಧೀಶರು ಜನರಿಗೆ ಧೈರ್ಯ ತುಂಬಿದರು. ಸರ್ಕಾರ ತಮ್ಮ ನೆರವಿಗೆ ಬರಲಿದೆ ಎಂದು ಅವರಿಗೆ ತಿಳಿಸಿದರು.

ಶುಕ್ರವಾರ ಬೆಳಗ್ಗೆ ಎಲ್ಲರಿಗೂ ಆಹಾರಧಾನ್ಯ ಪೂರೈಸಲಾಗುವುದು, ಪಡಿತರ ಚೀಟಿ ಇಲ್ಲದಿದ್ದರೂ ಸಹ ಆಹಾರ ಧಾನ್ಯ ಪೂರೈಸಲು ಕ್ರಮವಹಿಸಲಾಗುವುದು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಆರೋಗ್ಯ ಇಲಾಖೆ ಅಧಿಕಾರಿಗಳು ಕಾಲನಿಯ ಗರ್ಭಿಣಿಯರು ಸೇರಿ ಎಲ್ಲ ಜನರ ಆರೋಗ್ಯ ತಪಾಸಣೆ ಮಾಡಬೇಕೆಂದು ಸೂಚಿಸಿದರು. ಕರೊನಾ ಬಗ್ಗೆ ಭಯ ಬೇಡ ಎಚ್ಚರವಿರಲಿ, ಸರ್ಕಾರದ ಆದೇಶ ಪಾಲನೆ ಮಾಡಿ, ಸ್ವಚ್ಛತೆ ಬಗ್ಗೆ ಗಮನ ಕೊಡಬೇಕು ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಮತ್ತಿತರರು ಉಪಸ್ಥಿತರಿದ್ದರು.

EndFragment