ಧಾರವಾಡ: ರಾಜ್ಯಾದ್ಯಂತ ವೇಗವಾಗಿ ಹರಡುತ್ತಿರುವ ಕರೊನಾ 2ನೇ ಅಲೆ ತಡೆಗೆ ರಾಜ್ಯ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಜನರು ಮಾತ್ರ ಇದ್ಯಾವವೂ ನಮಗಲ್ಲ ಎಂಬ ಭಾವನೆಯಲ್ಲೇ ಇದ್ದಂತೆ ಕಾಣುತ್ತಿದೆ.
ಇದಕ್ಕೆ ಧಾರವಾಡ ಮಾರುಕಟ್ಟೆ ಹಾಗೂ ಎಪಿಎಂಸಿಯಲ್ಲಿ ಜಾತ್ರೆ ರೀತಿಯಲ್ಲಿ ಜನರು ಸೇರಿರುವುದೇ ಸಾಕ್ಷಿ. ಕರೊನಾ ಹರಡುವಿಕೆ ತಡೆಯಲು ಸರ್ಕಾರ 14 ದಿನಗಳ ಕಾಲ ಜನತಾ ಕರ್ಫ್ಯೂ ವಿಧಿಸಿದೆ. ನಿತ್ಯವೂ ಬೆಳಗ್ಗೆ 6 ಗಂಟೆಯಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ. ಆದರೆ, ಜನರು ಮಾತ್ರ ಮಂಗಳವಾರವೇ ತರಕಾರಿ ಖರೀದಿಗೆ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ.
ಬುಧವಾರದಿಂದ ತರಕಾರಿ ಸಿಗುತ್ತದೆಯೋ? ಇಲ್ಲವೋ? ಎಂಬ ಅನುಮಾನದಿಂದ ಮಾರುಕಟ್ಟೆಗೆ ಆಗಮಿಸಿದ್ದ ಜನರು ಪರಸ್ಪರ ಅಂತರವೇ ಮರೆತಿದ್ದರು. ಕೆಲವು ಮಾಸ್ಕ್ ಧರಿಸದೆ ಆಗಮಿಸುವ ಮೂಲಕ ನಮಗೆ ಕರೋನಾ ಬರಲ್ಲ ಎಂಬ ಭಂಡ ಧೈರ್ಯ ಪ್ರದಶಿಸುವ ಪ್ರಯತ್ನ ಮಾಡಿದ್ದಾರೆ. ಇದೇ ಕಾರಣಕ್ಕೆ ಬೆಳಗ್ಗೆಯೇ ಸಂಚಾರ ನಡೆಸಿದ ಡಿಸಿಪಿ ರಾಮರಾಜನ್, ಜನರಿಗೆ ತಿಳಿವಳಿಕೆ ಹೇಳಿ, ಸರ್ಕಾರದ ನಿಯಮಗಳನ್ನು ಪಾಲಿಸದಿದ್ದರೆ ದಂಡ ವಿಧಿಸುವ ಎಚ್ಚರಿಕೆ ಸಹ ನೀಡಿದರು.
ಇನ್ನು ಕೆಲ ದಿನಗಳ ಹಿಂದೆ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದ್ದ ಪಾಲಿಕೆ ಅಧಿಕಾರಿಗಳು, ನಿಯಮ ಪಾಲಿಸದಿದ್ದರೆ ಎಪಿಎಂಸಿ ಕಾರ್ಯದರ್ಶಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದರು. ಆದರೆ ಅಲ್ಲಿ ಸಹ ಬೆಳಗ್ಗೆ ಜನರು ಗುಂಪು ಗುಂಪಾಗಿ ತರಕಾರಿ ನಡೆಸಿದರು. ಕೆಲ ಹೊತ್ತಿನ ಬಳಿಕ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಹಾಗೂ ಪಾಲಿಕೆ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.