ಜಿಲ್ಲೆ

ಮಾರಿಗೆ 6 ಅಡಿ ಅಳೆಯುವಂತೆ ಒತ್ತಾಯ

ಚಿತ್ರದುರ್ಗ: ದಶಕದಿಂದಲೂ ಹೂವಿನ ಅಳತೆಯಲ್ಲಿ ವಂಚನೆ ಆಗುತ್ತಿದ್ದು, ಸೂಕ್ತ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ರಾಜ್ಯ ರೈತಸಂಘದ ಪದಾಧಿಕಾರಿಗಳು, ಹೂ ಬೆಳೆಗಾರರು ಮಂಗಳವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಅಳತೆ ಮತ್ತು ಮಾಪನ ಇಲಾಖೆಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಹೆಚ್ಚಾಗಿ ಹೂ ಬೆಳೆಯುತ್ತಿದ್ದು, ರೈತರು ಮಾರಾಟಕ್ಕಾಗಿ ಚಿತ್ರದುರ್ಗ ಎಪಿಎಂಸಿ ಆವರಣದ ಹೂವಿನ ಮಾರುಕಟ್ಟೆಗೆ ನಿತ್ಯವೂ ತರುತ್ತಾರೆ. ಆದರೆ, ಇಲ್ಲಿನ ಸಗಟು ವ್ಯಾಪಾರಸ್ಥರು ಈ ಹಿಂದಿನ ಒಪ್ಪಂದದಂತೆ ಪ್ರತಿ ಮಾರಿಗೆ 6 ಅಡಿ ಬದಲು 15 ಅಡಿ ಅಳೆಯುತ್ತಿದ್ದು, ವಂಚಿಸುತ್ತಿದ್ದಾರೆ. ಈ ಕುರಿತು ಅನೇಕ ಬಾರಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.

ಸೇವಂತಿ ಸೇರಿ ವಿವಿಧ ಹೂ ಬೆಳೆಗಳು ನಮ್ಮ ಜೀವನಾಡಿ, ಅದರಿಂದಲೇ ಬದುಕು ಕಟ್ಟಿಕೊಂಡು ಪಯಣ ಸಾಗುತ್ತಿದೆ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೂ ಅವಲಂಬಿತರಾಗಿದ್ದೇವೆ. ಆದರೆ, ಹೂ ಬೆಳೆಗಾರರಿಗೆ ಆಗುತ್ತಿರುವ ಮೋಸಕ್ಕೆ ಕಡಿವಾಣ ಬಿದ್ದಿಲ್ಲ ಎಂದು ದೂರಿದರು.

ಜಿಲ್ಲೆಯಲ್ಲಿ ಹೂಗಳನ್ನು ವಾಣಿಜ್ಯ ಕೃಷಿಯಾಗಿಯೂ ಬೆಳೆಯಲಾಗುತ್ತಿದೆ. ಅಲ್ಪಸ್ವಲ್ಪ ಅಚ್ಚುಕಟ್ಟು ಜಮೀನಿನಲ್ಲಿ ಇದರ ಉತ್ಪಾದನೆಯಲ್ಲಿ ಹಲವರು ನಿರತರಾಗಿದ್ದಾರೆ. ಚಿತ್ರದುರ್ಗ ತಾಲೂಕೊಂದರಲ್ಲೇ ಸಾವಿರಾರು ಕುಟುಂಬ ಜೀವನೋಪಾಯಕ್ಕಾಗಿ ಪುಷ್ಪ ಕೃಷಿಯಲ್ಲಿ ತೊಡಗಿವೆ. ಹೊಳಲ್ಕೆರೆ, ಚಳ್ಳಕೆರೆ ತಾಲೂಕು ಇದಕ್ಕೆ ಹೊರತಾಗಿಲ್ಲ. ಎಷ್ಟು ದಿನ ವಂಚನೆ ಸಹಿಸಿಕೊಳ್ಳೋದು ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಗೂ ದೂರು ನೀಡಿದ್ದೇವೆ. ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿಗೂ ವಂಚನೆ ತಡೆಯಲು ಮನವಿ ಸಲ್ಲಿಸಿದ್ದು, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರಿನ ಕೃಷಿ ಉತ್ಪನ್ನ ಮಾರಾಟ ಮಹಾಮಂಡಳಿಗೂ ಪತ್ರ ಬರೆದಿದ್ದಾರೆ. ಆದ್ದರಿಂದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ: ಕಷ್ಟಪಟ್ಟು ರೈತರು ಬೆಳೆಯುತ್ತಾರೆ. ಇನ್ನೂ ಮುಂದೆ ಯಾರಾದರೂ ಪ್ರತಿ ಮಾರಿಗೆ 6 ಅಡಿಗಿಂತ ಹೆಚ್ಚಿನ ಅಳತೆ ಮಾಡುವುದು ಕಂಡುಬಂದಲ್ಲಿ ಸಗಟು ಹೂವಿನ ವ್ಯಾಪಾರಸ್ಥರ ಪರವಾನಗಿ ರದ್ದುಗೊಳಿಸಲಾಗುವುದು. ನಿವೇಶನ ಹಂಚಿಕೆಯಾಗಿದ್ದಲ್ಲಿ ಸಮಿತಿ ವಶಕ್ಕೆ ಕ್ರಮವಹಿಸಲಾಗುವುದು. ಆದ್ದರಿಂದ ರೈತರಿಗೆ ಅನ್ಯಾಯ ಮಾಡಬೇಡಿ ಎಂದು ಎಪಿಎಂಸಿ ಸೂಚಿಸಿದೆ.

ಸಂಘದ ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಮುಖಂಡರಾದ ಪೂಜಾರಿ ಮಾರುತಿ, ಎನ್.ಎಸ್.ರಂಗೇಗೌಡ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬೆಳೆಗಾರರಾದ ಕೆ.ಎಂ.ಕಾಂತರಾಜು, ಮೂರ್ತಿ, ನಾಗರಾಜು, ಮಲ್ಲಣ್ಣ, ತಿಪ್ಪೇಸ್ವಾಮಿ, ಮಹಂತೇಶ್, ಮಂಜಣ್ಣ ಇತರರಿದ್ದರು.