ಜಿಲ್ಲೆ

ಮಾರಿಕಾಂಬೆಗೆ ಉಡಿ ಸಮರ್ಪಣೆ

ಶಿರಸಿ: ಈಡೇರಿದ ಬೇಡಿಕೆಯ ಜತೆ ಇಷ್ಟಾರ್ಥ ಸಿದ್ಧಿಗಾಗಿ ಲಕ್ಷಾಂತರ ಭಕ್ತರು ಶುಕ್ರವಾರ ಮಾರಿಕಾಂಬೆಗೆ ಉಡಿ ಸಮರ್ಪಿಸಿದರು.

ಶುಕ್ರವಾರ ದೇವಿಯ ವಾರ ಎಂಬ ಹಿನ್ನೆಲೆಯಲ್ಲಿ ಭಕ್ತರು ದೇವಿಗೆ ಉಡಿ ಹಾಗೂ ಇತರ ಹರಕೆ ಅರ್ಪಿಸಿದರು.

ನಸುಕಿನ ಜಾವ 4 ಗಂಟೆಯಿಂದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಭಕ್ತರ ಅನುಕೂಲಕ್ಕಾಗಿ ಗದ್ದುಗೆಯ ಬಳಿ ಪ್ರತ್ಯೇಕ ಕೌಂಟರ್ ತೆರೆದು ಉಡಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯದ ವತಿಯಿಂದಲೇ ಜಾತ್ರೆಗಾಗಿ 5 ಲಕ್ಷಕ್ಕೂ ಹೆಚ್ಚಿನ ಉಡಿ ಸಿದ್ಧಪಡಿಸಲಾಗಿದೆ.

ಕುರಿ ವ್ಯಾಪಾರ ಜೋರು: ಭಕ್ತರು ದೇವಿಗೆ ಸಮರ್ಪಿಸಲು ಕುರಿಗಳನ್ನು ಖರೀದಿಸುತ್ತಿದ್ದು, ದರ ಗಗನಕ್ಕೇರಿದೆ. ಚಿಕ್ಕ ಕುರಿ ಅಂದಾಜು 6 ಸಾವಿರ ರೂ., ದೊಡ್ಡ ಕುರಿಗೆ 15 ಸಾವಿರ ರೂ. ದರವಿತ್ತು. ನಿತ್ಯ ಕನಿಷ್ಠ 100ಕ್ಕೂ ಹೆಚ್ಚಿನ ಕುರಿಗಳು ಮಾರಾಟವಾಗುತ್ತಿವೆ.

ಅನ್ನ ಪ್ರಸಾದ ವಿತರಣೆ: ಭಕ್ತರಿಗಾಗಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ನಗರದ ಮಾರಿಗುಡಿ ಶಾಲೆ ಆವರಣ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಹಾಗೂ ಜೈ ಮಾರುತಿ ಸೇವಾ ವೇದಿಕೆ ಕೇಂದ್ರ, ರಾಘವೇಂದ್ರ ಸರ್ಕಲ್ ಗೆಳೆಯರ ಬಳಗದ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಮಾ.10ರವರೆಗೂ ಅನ್ನಸಂತರ್ಪಣೆ ನಡೆಯಲಿದೆ.

ಶುಚಿತ್ವ ಇಲ್ಲದಿದ್ದರೆ ಗೇಟ್​ಪಾಸ್: ಆಹಾರ ಪದಾರ್ಥ, ಸಿಹಿ ತಿನಿಸು, ಹಣ್ಣುಗಳನ್ನು ಸ್ವಚ್ಛವಾಗಿಡದ ಮಳಿಗೆಗಳನ್ನು ಜಾತ್ರಾ ಆವರಣದಿಂದ ತೆಗೆಸಲಾಗುವುದು ಎಂದು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಅರುಣ ಕಾಶಿ ಭಟ್ಟ ಎಚ್ಚರಿಸಿದರು. ಜಾತ್ರಾ ಚಪ್ಪರದ ಸುತ್ತಮುತ್ತಲ 25ಕ್ಕೂ ಹೆಚ್ಚು ಆಹಾರ ಮಳಿಗೆಗಳು, ಹೋಟೆಲ್​ಗಳಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ಗುಣಮಟ್ಟ ಪರೀಕ್ಷಿಸಿದರು. ಜನರ ಆರೋಗ್ಯ ಕೆಡುವಂತಹ ಯಾವುದೇ ಪದಾರ್ಥ ಬಳಸಬಾರದು. ಅಜಿನೊಮೋಟೊ, ರಾಸಾಯನಿಕ ಬಣ್ಣಗಳನ್ನು ನಿಷೇಧಿಸಬೇಕು. ಇಲ್ಲವಾದರೆ ಅನುಮತಿ ರದ್ದುಗೊಳಿಸುವ ಜತೆ, ಜಾತ್ರಾ ಆವರಣದಿಂದ ಅಂಗಡಿಯನ್ನು ತೆಗೆಸಲಾಗುವುದು ಎಂದು ಎಚ್ಚರಿಸಿದರು.

ಪೌರ ಕಾರ್ವಿುಕರ ಕಾರ್ಯಕ್ಕೆ ಮೆಚ್ಚುಗೆ: ದಿನಂಪ್ರತಿ ಕಂಡುಬರುವ ಎಲ್ಲ ತ್ಯಾಜ್ಯವನ್ನು ಬೆಳಗಾಗುವಷ್ಟರಲ್ಲಿ ಸ್ವಚ್ಛಗೊಳಿಸುವ ನಗರಸಭೆ ಪೌರಕಾರ್ವಿುಕರು ನಾಗರಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನೀರಿನ ಬಾಟಲಿ, ತಂಪು ಪಾನೀಯಗಳ ಕವರ್, ಗುಟ್ಖಾ ಸ್ಯಾಚೆಟ್, ಊಟೋಪಹಾರದ ತಟ್ಟೆ, ಅಂಗಡಿ- ಮುಂಗಟ್ಟುಗಳ ಕಸ… ಹೀಗೆ ಎಲ್ಲಿ ನೋಡಿದರಲ್ಲಿ ಕಸದ ಗುಡ್ಡೆ ಬೀಳುತ್ತಿದೆ. ತಡರಾತ್ರಿ ಜನ ಮನೆಯೆಡೆಗೆ ಸಾಗಿದರೆ ಪೌರ ಕಾರ್ವಿುಕರು ಮಾತ್ರ ಜಾತ್ರಾ ಆವರಣ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಮಗ್ನರಾಗುತ್ತಿದ್ದಾರೆ. ಜಾತ್ರೆಯ ಪ್ರಮುಖ ಸ್ಥಳಗಳಾದ ಬಿಡ್ಕಿಬಯಲು, ಶಿವಾಜಿ ಚೌಕ್, ಬಸ್ ನಿಲ್ದಾಣ ವೃತ್ತ, ನಟರಾಜ ರಸ್ತೆ, ದೇವಿಕೆರೆ, ಕೋಟೆಕೆರೆ ಮತ್ತಿತರ ಕಡೆ ಕಸ ಗುಡಿಸಿ ಜಾತ್ರಾ ಪೇಟೆ ಸುಂದರಗೊಳಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಗರಸಭೆಯ ಆರೋಗ್ಯ ನಿರೀಕ್ಷಕ ಆರ್.ಎಂ. ವೆರ್ಣೆಕರ್ ನೇತೃತ್ವದಲ್ಲಿ 90 ಪೌರ ಕಾರ್ವಿುಕರು ಜಾತ್ರೆಯ ಯಶಸ್ಸಿಗೆ ಸಹಕಾರ ನೀಡುತ್ತಿದ್ದಾರೆ. ಪ್ರತಿದಿನ ಬೆಳಗಿನ ಜಾವ 2 ರಿಂದ 6ರವರೆಗೆ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುತ್ತಾರೆ.