ಜಿಲ್ಲೆ

ಮಾರಿಕಾಂಬಾ ದೇವಿಯ ವರ ಪ್ರಸಾದ ಕುಂಕುಮ ಪೊಟ್ಟಣಗಳು ಸಿದ್ಧ

ಶಿರಸಿ: ದ್ವೈವಾರ್ಷಿಕವಾಗಿ ಆಚರಿಸಲ್ಪಡುವ ಮಾರಿಕಾಂಬಾ ಅಮ್ಮನ ಜಾತ್ರೋತ್ಸವದ ವೇಳೆ ಭಕ್ತರಿಗೆ ಪ್ರಸಾದವಾಗಿ ನೀಡುವ ಕುಂಕುಮವನ್ನು ಇಲ್ಲಿನ ಮಾರಿಕಾಂಬಾ ದೇವಾಲಯದಲ್ಲಿ ಲಕ್ಷಾಂತರ ಪುಟ್ಟಪುಟ್ಟ ಪೊಟ್ಟಣಗಳಲ್ಲಿ ಸಿದ್ಧಪಡಿಸಿಡಲಾಗಿದೆ.

ಫೆ.3ರಿಂದ ಒಂಬತ್ತು ದಿನಗಳ ಕಾಲ ನಡೆಯುವ ಮಾರಿ ಜಾತ್ರೆಗೆ ರಾಜ್ಯ-ಹೊರ ರಾಜ್ಯಗಳ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ದೇವಿಯ ಕುಂಕುಮ ಪ್ರಸಾದ ಜೊತೆ ಭಾವನಾತ್ಮಕ ಸಂಬಂಧ ವಿದೆ. ಜಾತ್ರೆಯಲ್ಲಿ ಎಷ್ಟೇ ಜನದಟ್ಟಣೆಯಿದ್ದರೂ, ಎಷ್ಟು ಅವಸರವಿದ್ದರೂ ದೇವಿಯ ಭಕ್ತರು ಕುಂಕುಮ ಪೊಟ್ಟಣ ಕೈಗೆ ಸಿಗದ ವಿನಾ, ದೇವಿಯ ಗದ್ದುಗೆಯ ಆವರಣದಿಂದ ಈಚೆಗೆ ಬರುವುದಿಲ್ಲ. ದೇವಿಗೆ ಹಣ್ಣು- ಕಾಯಿ ಪೂಜೆ ಸಲ್ಲಿಸುವವರೂ ಕುಂಕುಮ ಪೊಟ್ಟಣದೊಂದಿಗೆ ಮನೆಗೆ ಹೋಗುತ್ತಾರೆ. ಹೀಗಾಗಿ, ದೇವಾಲಯದ ಆಡಳಿತ ಮಂಡಳಿ ಕುಂಕುಮ ಸಿದ್ಧತೆಗೆ ವಿಶೇಷ ಆದ್ಯತೆ ನೀಡಿದೆ.

ಎರಡು ವಾರಗಳಲ್ಲಿ ದೇವಾಲಯದ 15ಕ್ಕೂ ಹೆಚ್ಚು ಸಿಬ್ಬಂದಿ ಕುಂಕುಮ ಪೊಟ್ಟಣ ತಯಾರಿಸಿಟ್ಟಿದ್ದಾರೆ. ಈಗಾಗಲೇ ಕುಂಕುಮ ಪ್ಯಾಕೆಟ್​ಗಳು ಯಂತ್ರದಲ್ಲಿ ಸೀಲ್ ಆಗಿ ಭಕ್ತರ ಕೈಸೇರಲು ಸಿದ್ಧಗೊಂಡಿವೆ. ದೂರದ ಊರಿನಿಂದ ಬರುವವರು ದೊಡ್ಡ ಪ್ರಮಾಣದಲ್ಲಿ ಪ್ಯಾಕೆಟ್​ಗಳನ್ನು ಒಯ್ಯುತ್ತಾರೆ.

ಅಮ್ಮನ ಕುಂಕುಮವೆಂದರೆ ನಮಗೆ ವರಪ್ರಸಾದವಿದ್ದಂತೆ. ಅಮ್ಮನ ಕುಂಕುಮ ಹಚ್ಚಿಕೊಂಡರೆ ನಮ್ಮ ಕಷ್ಟಗಳು ನಿವಾರಣೆಯಾಗುತ್ತವೆ. ಜಾತ್ರೆ ಬಂದವರು 15-20 ಪೊಟ್ಟಣವನ್ನು ತೆಗೆದುಕೊಂಡು ಹೋಗಿ, ಊರಿಗೆಲ್ಲ ಹಂಚುತ್ತೇವೆ. ಇದರಿಂದ ನಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತದೆ.| ರುಕ್ಮಾಬಾಯಿ ಭಕ್ತೆ

ತಮಿಳುನಾಡಿನಿಂದ ಶುದ್ಧ ಕುಂಕುಮವನ್ನು ತರಿಸಲಾಗಿದೆ. ಸುಮಾರು 2.5 ಟನ್ ಕುಂಕುಮ ಬಂದಿದೆ. ದೇವಿಗೆ ಅರ್ಚನೆ ಮಾಡಿರುವ ಈ ಕುಂಕುಮದಿಂದ 10 ಲಕ್ಷ ಪ್ಯಾಕೆಟ್ ಸಿದ್ಧಪಡಿಸಲಾಗಿದೆ. ವಿಶೇಷ ಸೇವೆ ಸಲ್ಲಿಸಿದವರಿಗೆ ದೇವಾಲಯದಿಂದಲೇ ಪ್ಯಾಕೆಟ್ ನೀಡಲಾಗುತ್ತದೆ. ದೇವಿ ದರ್ಶನಕ್ಕೆ ಬರುವವರಿಗೆ ಒಂದು ಪ್ಯಾಕೆಟ್​ಗೆ 10 ರೂ. ದರ ನಿಗದಿಪಡಿಸಲಾಗಿದೆ. | ವೆಂಕಟೇಶ ನಾಯ್ಕದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ