ಶಿರಸಿ: ನಾಡಿನ ಜಾಗೃತ ಶಕ್ತಿಪೀಠಗಳಲ್ಲಿ ಒಂದಾದ ಇಲ್ಲಿನ ಮಾರಿಕಾಂಬಾ ದೇವಿಯ ಪುನರ್ ಪ್ರತಿಷ್ಠಾ ಕಾರ್ಯಕ್ರಮ ಯುಗಾದಿಯಂದು ಧಾರ್ವಿುಕ ವಿಧಿವಿಧಾನದಂತೆ ಬುಧವಾರ ನೆರವೇರಿತು.
ಬೆಳಗ್ಗೆ 8.30 ಗಂಟೆಯಿಂದ ಧಾರ್ವಿುಕ ವಿಧಿಗಳು ಆರಂಭಗೊಂಡು 10 ಗಂಟೆ ಸುಮಾರಿಗೆ ಪೊಲೀಸ್ ಬಿಗಿ ಭದ್ರತೆಯಲ್ಲಿ ದೇವಾಲಯದ ಪ್ರಮುಖರು, ಕೆಲ ಬಾಬುದಾರರು ಹಾಗೂ ಅರ್ಚಕರು ಪಾಲ್ಗೊಂಡು ಪ್ರತಿಷ್ಠಾ ಕಾರ್ಯ ನೆರವೇರಿಸಿದರು. ನಾಡಿಗ ಕುಟುಂಬದ ಅಜಯ್ ನಾಡಿಗ್ ದಂಪತಿ ಹಾಗೂ ಅರ್ಚಕರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿನ ಸಮಸ್ತ ಜನತೆಗೆ ಒಳಿತಾಗಲೆಂದು ಪ್ರಾರ್ಥಿಸಿದರು.
ಲಾಕ್ ಡೌನ್ ಆದೇಶದ ಕಾರಣ ಭಕ್ತರಿಗೆ ದೇವಾಲಯ ಪ್ರವೇಶ ನಿರ್ಬಂಧಿಸಲಾಗಿತ್ತು. ದೇವಾಲಯದಲ್ಲಿ ದೇವಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಬಾಬುದಾರ ಪ್ರಮುಖ ಜಗದೀಶ ಗೌಡ ಸೇರಿ ಕೆಲವೇ ಜನರಿದ್ದರು. ಪೊಲೀಸ್ ಇಲಾಖೆ ಸಿಬ್ಬಂದಿ ಜನಜಂಗುಳಿ ಸೇರದಂತೆ ಮುನ್ನೆಚ್ಚರಿಕೆ ವಹಿಸಿತ್ತು.
ಪೂಜಾ ವಿಧಿವಿಧಾನದ ನಂತರ ದೇವಾಲಯದ ಹೆಬ್ಬಾಗಿಲನ್ನು ಮುಚ್ಚಲಾಯಿತು.