ವಿಜಯವಾಣಿ ಸುದ್ದಿಜಾಲ ಶಿರಸಿ: 8 ದಿನಗಳಿಂದ ಅದ್ದೂರಿಯಾಗಿ ಜರುಗುತ್ತಿರುವ ಮಾರಿಕಾಂಬಾ ಜಾತ್ರೋತ್ಸವಕ್ಕೆ ಬುಧವಾರ ಅಂತಿಮ ತೆರೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಸಾಕಷ್ಟು ಭಕ್ತರು ದೇವಿ ದರ್ಶನ ಪಡೆದರು.
ಎಂಟನೇ ದಿನವಾದ ಮಂಗಳವಾರ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಬೆಳಗಿನಿಂದ ರಾತ್ರಿಯವರೆಗೂ ದೇವಿಗೆ ವಿವಿಧ ಹರಕೆ ಸಲ್ಲಿಸಿದರು. ಜತೆ, ದೇವಿ ದರ್ಶನ ಪಡೆದು ಧನ್ಯರಾದರು. ಇಲ್ಲಿನ ಬಣ್ಣದ ಮಠದ ಶ್ರೀಶಿವಲಿಂಗ ಸ್ವಾಮೀಜಿ ದೇವಿಗೆ ಸೀರೆ ಅರ್ಪಿಸಿ, ಪೂಜೆ ಸಲ್ಲಿಸಿದರು.
ಸ್ವಯಂ ಸೇವಕರ ಕಾರ್ಯ ಶ್ಲಾಘನೀಯ: ಅಂಗವಿಕಲರು, ವೃದ್ಧರು, ಗರ್ಭಿಣಿಯರಿಗೆ ಅನುಕೂಲವಾಗಲು ಜಾತ್ರಾ ಚಪ್ಪರದೊಳಗೆ ಗಾಲಿ ಖುರ್ಚಿ ವ್ಯವಸ್ಥೆ ಮಾಡಿದ್ದು, ಈ ವಿಭಾಗದ ಸ್ವಯಂ ಸೇವಕರು ಅಕ್ಷರಶಃ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿದರು. ಜನದಟ್ಟಣೆಯ ನಡುವೆ ಗಾಲಿಖುರ್ಚಿ ಕೊಂಡೊಯ್ಯಲು ಸಮಸ್ಯೆಯಾದೆಡೆ ಖುರ್ಚಿ ಸಹಿತ ಭಕ್ತರನ್ನು ಹೊತ್ತೊಯ್ದು ದೇವಿಯ ದರ್ಶನಕ್ಕೆ ಅವಕಾಶ ಮಾಡಿದ್ದು ಭಕ್ತರ ಶ್ಲಾಘನೆಗೆ ಪಾತ್ರವಾಯಿತು. ಜಾತ್ರೆ ಆರಂಭದಿಂದ ಈವರೆಗೆ 7 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಈ ಗಾಲಿಖುರ್ಚಿ ಮೂಲಕ ದೇವಿಯ ದರ್ಶನ ಮಾಡಿಸಲಾಗಿದೆ.
ಗದ್ದುಗೆಯಿಂದ ನಿರ್ಗಮನ: ನವದಿನಗಳ ಜಾತ್ರೋತ್ಸವಕ್ಕೆ ಇಂದು ತೆರೆ ಬೀಳಲಿದೆ. ಬೆಳಗ್ಗೆ 10.30ರವರೆಗೆ ವಿವಿಧ ಸೇವೆಗಳಿಗೆ ಅವಕಾಶವಿದ್ದು, ನಂತರ ದೇವಿ ಗದ್ದುಗೆಯಿಂದ ಹೊರಡುವಳು. ಯುಗಾದಿಯಂದು ದೇವಾಲಯದಲ್ಲಿ ಪುನಃ ಪ್ರತಿಷ್ಠಾಪನೆಗೊಳ್ಳುವವರೆಗೆ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ವಿರುವುದಿಲ್ಲ.