ಚನ್ನರಾಯಪಟ್ಟಣ: ತಾಲೂಕಿನ ದಿಡಗ ಹಳೆ ಗ್ರಾಮದಲ್ಲಿ ಜೀರ್ಣೋದ್ಧರಗೊಂಡಿರುವ ಶ್ರೀ ಮಾರಿಕಾಂಬ ದೇವಿಯ ದೇಗುಲದ ಲೋಕಾರ್ಪಣೆ ಪ್ರಯುಕ್ತ ಬುಧವಾರ ರಾತ್ರಿ ದೇವಿಯ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಕುಂಭೋತ್ಸವ ವಿಜೃಂಭಣೆಯಿಂದ ನಡೆಯಿತು.
ಹಿನ್ನೆಲೆಯಲ್ಲಿ ದೇಗುಲಕ್ಕೆ ಹೂವಿನ ಚಪ್ಪರ ಹಾಕಲಾಗಿದ್ದು ವಿದ್ಯುತ್ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದು ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡವು.
ಮೊದಲಿಗೆ ಗಂಗಾ ಭಾಗೀರಥಿ ಪೂಜೆ, ಗೋಪೂಜೆ, ಸ್ವಸ್ತಿಪುಣ್ಯಾಹಃವಾಚನ, ಮಹಾ ಸಂಕಲ್ಪ, ಋತ್ವಿಗ್ವರ್ಣ, ರಕ್ಷಾಬಂಧನ, ಅಂಕುರಾರ್ಪಣೆ, ವಾಸ್ತು ರಕ್ಷೋಜ್ಞ ಹೋಮ, ವಾಸ್ತು ಬಲಿ ಪ್ರಧಾನ ಹಾಗೂ ಆಲಯ ಪ್ರವೇಶ ಜರುಗಿತು.
ಸಂಜೆ ಸುಮಾರಿನಲ್ಲಿ ಧ್ವಜಾರೋಹಣ, ಗಣಪತಿ ಪೂಜೆ, ಸ್ವಸ್ತಿವಾಚನ, ದೇವನಾಂದಿ, ಗಣಪತಿ ಹೋಮ, ನವಗ್ರಹ ಹೋಮ, ದುರ್ಗಾಮೂಲಮಂತ್ರ ಹೋಮ, ಮಂಟಪಾ ದೇವತಾ ಪೂಜೆ, ಪ್ರಾಯಾಶ್ಚಿತ ಹೋಮ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.
ರಾತ್ರಿ 7.30 ರಲ್ಲಿ ಮಂಗಳವಾಧ್ಯದೊಂದಿಗೆ ಶ್ರೀ ಮಾರಿಕಾಂ ದೇವಿಯ ಅಡ್ಡಪಲ್ಲಕ್ಕಿ ಉತ್ಸವ ಪ್ರಾರಂಭಗೊಂಡು ಕೆರೆಯ ದಡಕ್ಕೆ ಸಾಗಿತು. 101 ಕುಂಭಗಳಿಗೆ ಗಂಗೆ ತುಂಬಿಸಿ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಹೆಣ್ಣಮಕ್ಕಳು ಗಂಗೆ ತುಂಬಿದ ಕುಂಭಗಳನ್ನು ಹೊತ್ತು ಶ್ರೀ ಅಮ್ಮನವರೊಂದಿಗೆ ಸರದಿ ಸಾಲಿನಲ್ಲಿ ಸಾಗಿದರೆ ಹಿರಿಯ ತಾಯಂದಿರು ದೇವಿ ಮೇಲಿನ ಸೋಬಾನೆ ಪದ ಹಾಡಿದರು. ಕೆಂಚರಾಯ ಹಾಗೂ ಭೂತರಾಯ ಸೋಮಗಳ ಕುಣಿತ ನೋಡುಗರ ಗಮನ ಸೆಳೆಯಿತು.
ಮೂಲ ದೇಗುಲಕ್ಕೆ ಕುಂಭೋತ್ಸವ ಆಗಮಿಸಿದ ಬಳಿಕ ವಿವಿಧ ಹೋಮ ಹವನಗಳು ಜರುಗಿದವು. ಮಹಾ ಮಂಗಳಾರತಿ ಬೆಳಗಿಸಿದ ಬಳಿಕ ಅನ್ನದಾಸೋಹ ನಡೆಯಿತು. ದಿಡಗ, ಕನುವನಘಟ್ಟ, ಕರಿಕ್ಯಾತನಹಳ್ಳಿ, ನರಿಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.