ಚಿತ್ರದುರ್ಗ: ತಾಲೂಕಿನ 158 ಹಳ್ಳಿಗಳಿಗೆ ಮಾರಿಕಣಿವೆ ಮೂಲಕ ಕುಡಿಯುವ ನೀರಿನ ಯೋಜನೆ ಅನುಷ್ಠಾನವಾಗಲಿದೆ. ಅದರಲ್ಲಿ ಚಿಕ್ಕಾಲಘಟ್ಟವೂ ಸೇರಿದೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತಿಳಿಸಿದರು.
ಚಿಕ್ಕಾಲಘಟ್ಟ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ತಾಲೂಕು ಆಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಗ್ರಾಮದ ಬಹುದಿನಗಳ ಬೇಡಿಕೆಯಾದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಈಗಾಗಲೇ ಸ್ಥಳ ಗುರುತಿಸಲಾಗಿದೆ. ಶೀಘ್ರ ಕಾರ್ಯಾರಂಭವಾಗಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಮುಚ್ಚುವ ಹಂತದಲ್ಲಿದ್ದ ಗ್ರಾಮದ ಸರ್ಕಾರಿ ಶಾಲೆ ಉಳಿಸಲಾಗಿದೆ. ಗ್ರಾಮವನ್ನು ಗಣಿಭಾದಿತ ಪ್ರದೇಶ ವ್ಯಾಪ್ತಿಗೆ ಸೇರಿಸಬೇಕೆಂಬುದು ಗ್ರಾಮಸ್ಥರ ಒತ್ತಾಯ. ಆದ್ಯತೆಯಾಗಿ ಪರಿಗಣಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಮನೆಗಳು ಮಂಜೂರಾಗಲಿವೆ. ಗ್ರಾಮ ಸಭೆ ಮೂಲಕ ಅರ್ಹ ಫಲಾನುಭವಿಗಳಿಗೆ ಹಂಚುವ ಕಾರ್ಯ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.
ಗ್ರಾಮದ ಈಶ್ವರ ಹಾಗೂ ದುರ್ಗಾಂಭ ದೇವಿ ದೇಗುಲಗಳ ಜೀರ್ಣೋದ್ಧಾರಕ್ಕೆ ಮುಜರಾಯಿ ಇಲಾಖೆಯಿಂದ ತಲಾ 5 ಲಕ್ಷ ರೂ. ನಂತೆ ಒಟ್ಟು 10 ಲಕ್ಷ ರೂ., ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ 15 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದರು.
ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಮಾತನಾಡಿ, ಗ್ರಾಮದಲ್ಲಿನ ಸಮಸ್ಯೆ ಆಲಿಸಿ, ಅಹವಾಲುಗಳನ್ನು ಸ್ವೀಕರಿಸಲಾಗಿದೆ. ನಿಗದಿತ ಸಮಯದೊಳಗೆ ಈ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಇದು ಜನಸ್ಪಂದನದ ಪ್ರಮುಖ ಉದ್ದೇಶ ಎಂದು ಹೇಳಿದರು.
ತಹಸೀಲ್ದಾರ್ ಡಾ.ನಾಗವೇಣಿ ಮಾತನಾಡಿ, ಜನಸ್ಪಂದನ ಕಾರ್ಯಕ್ರಮದಲ್ಲಿ ಐಪಿಜಿಆರ್‌ಎಸ್ ತಂತ್ರಾಂಶದ ಮೂಲಕ ಅರ್ಜಿ ಸ್ವೀಕರಿಸಿದ್ದು, ಸಮಸ್ಯೆಗೆ ಪರಿಹಾರ ದೊರಕಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.
ಗ್ರಾಮದಲ್ಲಿ ಸಂಭ್ರಮ: ಹಸಿರು ತೋರಣದಿಂದ ಅಲಂಕೃತಗೊಂಡ ಜೋಡೆತ್ತಿನ ಬಂಡಿಯ ಮೂಲಕ ಶಾಸಕ ವೀರೇಂದ್ರಪಪ್ಪಿ ಅವರನ್ನು ಗ್ರಾಮಕ್ಕೆ ಕರೆತರಲಾಯಿತು. ಪೂರ್ಣಕುಂಭ ಹೊತ್ತ ಅಂಗನಾಡಿ ಕಾರ್ಯಕರ್ತೆಯರು ಸ್ವಾಗತಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸೌಲಭ್ಯ ವಿತರಣೆ: ಇದೇ ವೇಳೆ ಕಾರ್ಮಿಕರ ಇಲಾಖೆಯಿಂದ 25 ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್, ಸಮವಸ್ತ್ರ, ಶಿಕ್ಷಣ ಇಲಾಖೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ, ಅಂಗವಿಕಲರ ಕಲ್ಯಾಣ ಇಲಾಖೆಯಿಂದ ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ವಿತರಿಸಲಾಯಿತು. ಉಚಿತ ಆರೋಗ್ಯ ತಪಾಸಣೆ ನಡೆಯಿತು.
ತಾಪಂ ಇಒ ಎಚ್.ಹನುಮಂತಪ್ಪ, ಬಿಇಒ ಎಸ್.ನಾಗಭೂಷಣ್, ಗ್ರೇಡ್-2 ತಹಸೀಲ್ದಾರ್ ನಾಗರಾಜ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ಜಿಪಂ ಮಾಜಿ ಸದಸ್ಯ ನರಸಿಂಹಮೂರ್ತಿ, ಆಲಘಟ್ಟ ಗ್ರಾಪಂ ಅಧ್ಯಕ್ಷ ಕೆ.ಎಂ.ನಾಗರಾಜ್, ಉಪಾಧ್ಯಕ್ಷೆ ನಿರ್ಮಲಮ್ಮ, ಗ್ರಾಪಂ ಸದಸ್ಯರು ಇತರರಿದ್ದರು.