ಜಿಲ್ಲೆ

ಮಾರಿ ದೇಗುಲಕ್ಕೆ ಸುಣ್ಣ, ಬಣ್ಣ

ಶಿರಸಿ: ಇಲ್ಲಿನ ಮಾರಿಕಾಂಬಾ ದೇವಿ ಜಾತ್ರೆಗೆ ಈಗಿಂದಲೇ ಸಿದ್ಧತೆ ಆರಂಭವಾಗಿದ್ದು, ದೇವಾಲಯಕ್ಕೆ ಸುಣ್ಣ, ಬಣ್ಣ ಬಳಿಯುವ ಕಾರ್ಯ ಭರದಿಂದ ಸಾಗಿದೆ.

ದೇವಾಲಯದ ಪರಂಪರೆಯಂತೆ 2 ವರ್ಷಕ್ಕೊಮ್ಮೆ ಬಣ್ಣಗಾರಿಕೆ ಮಾಡಲಾಗುತ್ತಿದೆ. ಮೂಲ ಕಾವಿ ಕಲೆಗೆ ಧಕ್ಕೆಯಾಗದಂತೆ ಬಣ್ಣ ಬಳಿಯುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಶಿಥಿಲವಾದ ಕಡೆಗಳಲ್ಲಿ ಹೊಸ ಬಣ್ಣ ಬಳಿಯಲಾಗುತ್ತಿದ್ದು, ಬಣ್ಣಗಾರಿಕೆ ಪೂರ್ಣಗೊಂಡರೆ ಇಡೀ ದೇವಾಲಯದ ಸೌಂದರ್ಯ ಇಮ್ಮಡಿಸಲಿದೆ.

ಉಳಿದಂತೆ ಆಚಾರಿ, ಗುಡಿಗಾರಿಕೆ, ದೇವರ ಬಣ್ಣಗಾರಿಕೆ, ಸೀಲಿಂಗ್ ಕಾಮಗಾರಿ, ಗಾವಂಡಿ ಕಾರ್ಯಗಳಲ್ಲಿ 100ಕ್ಕೂ ಹೆಚ್ಚು ಕೆಲಸಗಾರರು ತೊಡಗಿಸಿಕೊಂಡಿದ್ದಾರೆ. ಜಾತ್ರೆಗೂ ಮುನ್ನ ಫೆ.15ರೊಳಗೆ ದೇವಾಲಯದ ಎಲ್ಲ ಬಣ್ಣಗಾರಿಕೆ ಕಾರ್ಯ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.

ದೇವಾಲಯದ ಸಂಪ್ರದಾಯದಂತೆ ಈಗಾಗಲೇ ಮಂಟಪ ಕಳಚುವ ಕಾರ್ಯವಾಗಿದೆ. ದೇವಾಲಯದ ಕೊಠಡಿಯೊಂದರಲ್ಲಿ ಇಡೀ ಮಂಟಪಕ್ಕೆ ಹೊಸ ಬಣ್ಣ ಬಳಿದು ಶೃಂಗರಿಸಲಾಗುತ್ತಿದೆ. ಸಾಂಪ್ರದಾಯದ ಪ್ರಕಾರ ಸಂಬಂಧಪಟ್ಟ ಬಣ್ಣಗಾರಿಕೆಯವರಿಗೆ ಮಾತ್ರ ಅಲ್ಲಿ ಪ್ರವೇಶ ನೀಡಲಾಗಿದೆ. ಇನ್ನು ಜಾತ್ರಾ ಗದ್ದುಗೆ ಇರುವ ಬಿಡಕಿಬೈಲಲ್ಲಿ ಫೆ. 10ರಿಂದ ಚಪ್ಪರ ಕಾರ್ಯ ಪ್ರಾರಂಭಿಸಲು ದೇವಾಲಯದ ಆಡಳಿತ ಮಂಡಳಿ ತೀರ್ವನಿಸಿದೆ. ಈಗಾಗಲೇ ಇಲ್ಲಿನ ಅಂಗಡಿಕಾರರಿಗೆ ಅಂಗಡಿ ತೆರವು ಮಾಡುವಂತೆ ಸೂಚನೆ ನೀಡಲಾಗಿದ್ದು, ತೆರವಾದ ದಿನದಿಂದ ಚಪ್ಪರ ಹಾಕುವ ಕಾರ್ಯ ಚುರುಕು ಪಡೆಯಲಿದೆ. ಜತೆಗೆ ಈ ಬಾರಿ ಜಾತ್ರಾ ಪ್ರಚಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಪ್ರಚಾರ ಕಾರ್ಯವನ್ನು ವಿಶೇಷವಾಗಿ ಮಾಡಲು ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ಕಳೆದ ಜಾತ್ರೆಯಲ್ಲಿ ರಾಜ್ಯದ ಎಲ್ಲ ಬಸ್ ನಿಲ್ದಾಣಗಳಲ್ಲಿ ಧ್ವನಿ ವರ್ಧಕ ಬಳಸಿ

ಪ್ರಚಾರ ಮಾಡಲಾಗಿತ್ತು. ಪ್ರಸಕ್ತ ಜಾತ್ರೆಗೆ ಈ ವ್ಯವಸ್ಥೆಯನ್ನೂ ಒಳಗೊಂಡು ಸಾಮಾಜಿಕ ಜಾಲತಾಣಗಳ ಹೆಚ್ಚಿನ ಬಳಕೆ ಮೂಲಕ ಪ್ರಚಾರ ಮಾಡಲಾಗುವುದು ಎಂದು ಆಡಳಿತ ಮಂಡಳಿ ಪ್ರಮುಖರು ಮಾಹಿತಿ ನೀಡುತ್ತಾರೆ.

ಮಾರಿಕಾಂಬಾ ದೇವಿ ಜಾತ್ರೆ ವರ್ಷದಿಂದ ವರ್ಷಕ್ಕೆ ಅದ್ಧೂರಿಯಾಗಿ ಆಚರಿಸಲ್ಪಡುತ್ತಿದೆ. ಈ ಬಾರಿ ಕೂಡ ಮಾ. 3ರಿಂದ ಜಾತ್ರೋತ್ಸವ ಆರಂಭವಾಗಲಿದ್ದು, ಈಗಿನಿಂದಲೇ ಸಿದ್ಧತೆ ನಡೆಸಲಾಗಿದೆ. ದೇವಾಲಯ ಸೌಂದಯೀಕರಣದ ಜತೆ, ಭಕ್ತರು ಉಳಿದುಕೊಳ್ಳಲು ಶೆಡ್ ನಿರ್ಮಾಣ ಮಾಡಲಾಗುತ್ತಿದೆ. ಜಾತ್ರಾ ಗದ್ದುಗೆಯನ್ನೂ ಒಳಗೊಂಡು ಸುತ್ತಮುತ್ತ ಸ್ವಚ್ಛತೆ, ಮಳಿಗೆಗಳ ಹರಾಜು, ಚಪ್ಪರ ನಿರ್ಮಾಣ ಕಾರ್ಯ ಶೀಘ್ರದಲ್ಲಿ ಆರಂಭಿಸಲಾಗುವುದು. ಜಾತ್ರೆ ಕಾರ್ಯ ಪಾರದರ್ಶಕವಾಗಿ ಮಾಡಿದರೂ ಹಲವರು ಅನುಮಾನದಿಂದ ನೋಡುತ್ತಿದ್ದ ಕಾರಣ ಈ ಬಾರಿ ಪ್ರತಿ ಕಾರ್ಯದ ಗುತ್ತಿಗೆಗೆ ಎಷ್ಟು ಜನ ಗುತ್ತಿಗೆ ಆಸಕ್ತಿ ತೋರಿದ್ದಾರೆ ಅಷ್ಟೂ ಜನರನ್ನು ದೇವಾಲಯಕ್ಕೆ ಕರೆದು ರ್ಚಚಿಸಿ ಕಾಮಗಾರಿ ನೀಡಲು ಮಂಡಳಿ ಕ್ರಮ ಕೈಗೊಂಡಿದೆ. | ಡಾ.ವೆಂಕಟೇಶ ನಾಯ್ಕ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ