ಜಿಲ್ಲೆ

ಮಾರಿ ಜಾತ್ರೆಗೆ ನೂತನ ಸಂಚಾರ ಮಾರ್ಗ

ಶಿರಸಿ: ದಕ್ಷಿಣ ಭಾರತದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಇಲ್ಲಿನ ಮಾರಿಕಾಂಬಾ ಜಾತ್ರೆಯಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಹೊಸ ಮಾರ್ಗಗಳನ್ನು ಗುರುತಿಸಿದೆ. ಆದರೆ, ಈ ಮಾರ್ಗಗಳು ಅವೈಜ್ಞಾನಿಕ ಹಾಗೂ ಇನ್ನಷ್ಟು ವಾಹನ ದಟ್ಟಣೆಗೆ ಕಾರಣವಾಗುವ ಸಾಧ್ಯತೆ ಇದೆ.

ಕುಮಟಾ, ಸಿದ್ದಾಪುರ ಕಡೆಯಿಂದ ಜಾತ್ರೆಗಾಗಿ ಶಿರಸಿಗೆ ಬರುವ ವಾಹನಗಳು ಐದು ಸರ್ಕಲ್-ಝುೂ ಸರ್ಕಲ್-ಸಿ.ಪಿ. ಬಜಾರ್-ಬಾರಕೂರ ಚೌಕ-ಶ್ರದ್ಧಾನಂದಗಲ್ಲಿ ಮೂಲಕ ಸಾಗಿ ಐದು ಸರ್ಕಲ್ ಪೆಟ್ರೋಲ್ ಬಂಕ್ ಬಳಿಯ ಡ್ರಾಪ್ ಪಾಯಿಂಟ್​ನಲ್ಲಿ ಪ್ರಯಾಣಿಕರನ್ನು ಇಳಿಸಬೇಕು. ನಂತರ ಉರ್ದುಶಾಲೆ-ಅರ್ಬನ್ ಬ್ಯಾಂಕ್-ಕರ್ಜಗಿ ಕಲ್ಯಾಣ ಮಂಟಪ- ಶಂಕರಹೊಂಡ ಮಾರ್ಗ ವಾಗಿ ರ್ಪಾಂಗ್ ವ್ಯವಸ್ಥೆ ಇರುವ ವಿಜಯನಗರ ಹಾಗೂ ಪ್ರೊಗ್ರೆಸ್ಸಿವ್ ಮೈದಾನಕ್ಕೆ ತೆರಳಬೇಕು. ಈ ಮಾರ್ಗ ತೀರಾ ಅವೈಜ್ಞಾನಿಕವಾಗಿದ್ದು, ಬಸ್, ಲಾರಿಗಳ ಸಂಚಾರ ಕಷ್ಟಸಾಧ್ಯ. ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಮಾಡಿದ ಈ ಹೊಸ ಮಾರ್ಗ ಇನ್ನಷ್ಟು ವಾಹನ ದಟ್ಟಣೆಗೆ ಎಡೆ ಮಾಡುವುದು ನಿಶ್ಚಿತ ಎಂಬುದು ವಾಹನ ಸವಾರರ ಮಾತು.

ಜಾತ್ರೆ ವೇಳೆ ಐದು ಸರ್ಕಲ್ ನಿಂದ ಝುೂ ಸರ್ಕಲ್ ವರೆಗೆ ಬಹುತೇಕ ಏಕ ಮುಖ ಸಂಚಾರ ನಿಯಮ ಜಾರಿಯಲ್ಲಿರಲಿದ್ದು, ಈ ವೇಳೆ ಬೃಹತ್ ವಾಹನಗಳು ಕೂಡ ಜನವಸತಿ ಇರುವ ಸಿಪಿ ಬಜಾರ್​ದಲ್ಲಿ ಸಂಚರಿಸುವುದು ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ. ನಗರದ ಹೊರಗಡೆ ವಾಹನ ದಟ್ಟಣೆ ನಿಯಂತ್ರಿಸುವ ಭರದಲ್ಲಿ ನಗರದೊಳಗೆ ಇನ್ನಷ್ಟು ಇಕ್ಕಟ್ಟು ನಿರ್ವಿುಸುತ್ತಿದೆ. ಹೊಸ ಮಾರ್ಗಗಳು ವೈಜ್ಞಾನಿಕ ದೃಷ್ಟಿಕೋನದಲ್ಲಿದ್ದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಅದರಂತೆ ಅವೈಜ್ಞಾನಿಕವಾಗಿದ್ದರೆ ಇಡೀ ಜಾತ್ರೆಗೆ ಕಪ್ಪು ಮಸಿ ಬಳಿಯುತ್ತದೆ. ಹಾಗಾಗಿ ನಗರದ ಸಿ.ಪಿ. ಬಜಾರ್​ದೊಳಗೆ ವಾಹನ ಸಂಚಾರಕ್ಕೆ ಅವಕಾಶ ನೀಡದೆ ಈ ಮೊದಲಿದ್ದಂತೆ ಇರಲಿ ಎಂಬುದು ಸ್ಥಳಿಕರ ಅಭಿಪ್ರಾಯ.

ಜಾತ್ರೆ ವೇಳೆ ಐದು ಸರ್ಕಲ್​ನಲ್ಲಿ ಒಂದು ನಿಮಿಷ ಸಂಚಾರಕ್ಕೆ ತಡೆಯಾದರೆ 2 ಕಿ.ಮೀ. ವರೆಗೆ ವಾಹನ ಸಾಲು ನಿಲ್ಲುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಹೊಸ ಮಾರ್ಗ ಮಾಡಲಾಗಿದೆ. ಈಗಾಗಲೇ ಈ ಮಾರ್ಗದಲ್ಲಿ ಬೃಹತ್ ವಾಹನ ಕೊಂಡೊಯ್ದು ಪರೀಕ್ಷಿಸಲಾಗಿದೆ. ಫೆ. 26ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಈ ಮಾರ್ಗದಲ್ಲಿ ವಾಹನ ಸಂಚಾರ ಆರಂಭಿಸಿ ಮತ್ತೊಮ್ಮೆ ಪ್ರಾಯೋಗಿಕ ಪರೀಕ್ಷೆ ಮಾಡಲಾಗುವುದು. ವಾಹನ ಸಂಚಾರ ಸುಗಮವಾಗಿರಬೇಕು. ಜನರಿಗೆ ಸಮಸ್ಯೆ ತಪ್ಪಬೇಕು. ಈ ನಿಟ್ಟಿನಲ್ಲಿ ಯಾವುದೇ ಊಹಾಪೋಹಕ್ಕೆ ಮಾನ್ಯತೆ ನೀಡುವುದಿಲ್ಲ.| ಜಿ.ಟಿ.ನಾಯಕ ಡಿವೈಎಸ್​ಪಿ, ಶಿರಸಿ