ಪಿ.ಎಸ್.ಹರೀಶ್, ಕೋಲಾರ: ಕರೊನಾ ಮಹಾಮಾರಿಯಿಂದ ಘೋಷಣೆಯಾದ ಲಾಕ್‌ಡೌನ್ ರೈತರ ಬದುಕಿಗೆ ಬಲವಾದ ಪೆಟ್ಟು ನೀಡಿದೆ ನಿಜ, ಆದರೆ ಸಂಕಷ್ಟಗಳಿಗೆ ಕುಗ್ಗದೆ ಮುನ್ನುಗ್ಗುವ ರೈತರಿಗೆ ಕೃಷಿ ಉತ್ಪನ್ನಗಳ ಮಾರಾಟದ ಪಾಠವನ್ನು ಕಲಿಸಿದೆ.
ಹಣ್ಣು, ತರಕಾರಿ ಬೆಳೆದು ಫಸಲನ್ನು ಎಪಿಎಂಸಿಯಲ್ಲಿ ಕಮಿಷನ್ ಏಜೆಂಟ್, ವರ್ತಕ ಹೇಳಿದ ಬೆಳೆಗೆ ಮಾರುವುದು, ಅದೃಷ್ಟದಾಟದಲ್ಲಿ ಉತ್ತಮ ಬೆಲೆ ಸಿಕ್ಕರೆ ರೊಕ್ಕ ಎಣಿಸಿಕೊಳ್ಳುವುದು ಇಲ್ಲವೇ ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಸಿಕ್ಕಿದ ಬೆಲೆಗೆ ತೃಪ್ತಿಪಡುವುದುರಲ್ಲಿ ರೈತರ ಬದುಕು ಮುಗಿದು ಹೋಗುತ್ತಿತ್ತು.
ಮಾರುಕಟ್ಟೆ ಸಂಕಷ್ಟ: ಕರೊನಾ ಲಾಕ್‌ಡೌನ್‌ನಿಂದಾಗಿ ಹಣ್ಣು, ತರಕಾರಿಗಳಿಗೆ ಮಾರುಕಟ್ಟೆ ಇಲ್ಲದಾಗಿದೆ. ಎಪಿಎಂಸಿ ಇದ್ದರೂ ಕೊಳ್ಳುವವರಿಲ್ಲದೆ ಅನೇಕ ರೈತರು ಟೊಮ್ಯಾಟೊ, ಕ್ಯಾಪ್ಸಿಕಂ, ಹೂಕೋಸು, ಎಲೆಕೋಸು ಬೆಳೆಗಳನ್ನು ತೋಟದಲ್ಲೇ ಬಿಟ್ಟಿದ್ದಾರೆ. ಕೆಲವರು ಬೀದಿಪಾಲು ಮಾಡಿದರೆ, ಕೆಲವರು ಉಚಿತವಾಗಿ ಹಂಚುತ್ತಿದ್ದಾರೆ. ಸ್ವಲ್ಪ ಭಾಗ ಮಾತ್ರ ಮಾರುಕಟ್ಟೆ ವ್ಯವಸ್ಥೆ ಆಗುತ್ತಿದೆ.
ಕರೊನಾ ಕಲಿಸಿದ ಪಾಠ: ಮಧ್ಯವರ್ತಿಗಳಿಗೆ ತರಕಾರಿ ಮಾರಾಟ ಮಾಡಿ ಕೈ ತೊಳೆದುಕೊಳ್ಳುತ್ತಿದ್ದ ರೈತರಲ್ಲಿ ಕೆಲ ಪ್ರಗತಿಪರ ರೈತರು ಬೆಳಗ್ಗೆಯೇ ತರಕಾರಿಗಳನ್ನು ವಾಹನದಲ್ಲಿ ಬೆಂಗಳೂರಿನ ಅಪಾರ್ಟ್‌ಮೆಂಟ್ ಬಳಿ, ಇಲ್ಲವೇ ಆಯಕಟ್ಟಿನ ಪ್ರದೇಶಕ್ಕೆ ಕೊಂಡೊಯ್ದು ನೇರವಾಗಿ, ಎನ್‌ಜಿಒ ಸಹಾಯದಿಂದ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಈ ಪೈಕಿ ಶ್ರೀನಿವಾಸಪುರ ತಾಲೂಕಿನ ದಿಗುವಪಲ್ಲಿ ಗ್ರಾಮದ ರೈತ ರಾಜಾರೆಡ್ಡಿ ಕೂಡ ಒಬ್ಬರು. ಮಂಡಿಯಲ್ಲಿ ಒಂದು ಬಾಕ್ಸ್ ಟೊಮ್ಯಾಟೊಗೆ 45 ರೂ, ಸಾಗಾಟ ಇನ್ನಿತರ ಖರ್ಚು ಕಳೆದರೆ ಏನೂ ಉಳಿಯದು, ಬೆಂಗಳೂರಿನಲ್ಲಿ ಪ್ರತಿ ಕೆಜಿಗೆ 10 ರೂ. ನಂತೆ ನೇರವಾಗಿ ಗ್ರಾಹಕರಿಗೆ ಮಾರಿದರೂ ಕೆಜಿ ಮೇಲೆ 5 ರೂ. ಹೆಚ್ಚು ಪಡೆಯಬಹುದು ಎಂದು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಇದೇ ಪ್ರಥಮ ಬಾರಿಗೆ ಟೊಮ್ಯಾಟೊ ಮಾರಾಟ ಮಾಡುತ್ತಿರುವ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ.
ಕೋಲಾರದ ರೈತ ಚಂದ್ರಶೇಖರ್ ವೈಟ್‌ಫೀಲ್ಡ್‌ನಲ್ಲಿ ಎನ್‌ಜಿಒ ಸಹಾಯದಿಂದ ತರಕಾರಿಗಳನ್ನು ಸುಸಜ್ಜಿತವಾಗಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಸಹಾಯ ಕೇಳಿ ಬಂದ ಅನೇಕ ರೈತರಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎನ್‌ಜಿಒಗಳ ಸಂಪರ್ಕ ಕಲ್ಪಿಸಿಕೊಟ್ಟು ಮಧ್ಯವರ್ತಿಗಳ ಹಾವಳಿ ಇಲ್ಲದೆ ತರಕಾರಿಗಳ ಮಾರಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಯುವ ರೈತರು ಸಾಮಾಜಿಕ ಜಾಲತಾಣ ಬಳಸಿಕೊಂಡು ಗ್ರಾಹಕರು ಇರುವ ಕಡೆ ನೇರವಾಗಿ ಮಾರಾಟ ಮಾಡುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ಸಣ್ಣಪುಟ್ಟ ರೈತರು ಟಾಟಾ ಏಸ್ ಇನ್ನಿತರ ಸ್ವಂತ ವಾಹನಗಳಲ್ಲಿ ಕಾಯಿಪಲ್ಲೆ ತುಂಬಿಸಿಕೊಂಡು ನಗರ ಪ್ರದೇಶದ ಗಲ್ಲಿ ಗಲ್ಲಿಗೆ ಹೋಗಿ ಮಾರಾಟ ಮಾಡುವ ಮಾರ್ಗ ಕಂಡುಕೊಂಡಿದ್ದಾರೆ. ಸೇವಂತಿಗೆ ಇನ್ನಿತರ ಹೂವು ಬೆಳೆಗಾರರು ಕೂಡ ಕೆಲವೆಡೆ ಇದೇ ಮಾರ್ಗ ಅನುಸರಿಸಿದ್ದಾರೆ.
ಪೊಲೀಸರು ಅವಕಾಶ ನೀಡುತ್ತಿಲ್ಲ: ಕೋಲಾರ, ಮುಳಬಾಗಿಲು, ಮಾಲೂರು ತಾಲೂಕುಗಳಲ್ಲಿ ಕೆಲ ರೈತರು ಮಾರ್ಗದರ್ಶನ ಇಲ್ಲದೆ ನೇರವಾಗಿ ಮಾರಾಟ ಮಾಡಲು ಹೋಗಿ ಖರೀದಿದಾರರು ಸಿಗದೆ ವಾಪಸಾಗಿದ್ದಾರೆ. ಬೆಂಗಳೂರು ರೆಡ್ ಜೋನ್ ಆಗಿರುವುದರಿಂದ ಅತ್ತ ತೆರಳಲು ಪೊಲೀಸರು ಕೂಡ ಅವಕಾಶ ನೀಡುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ.
ರೈತರು ಎಲ್ಲ ಕಾಲಕ್ಕೂ ಮಧ್ಯವರ್ತಿಗಳನ್ನೇ ನಂಬಿದರೆ ಆಗದು, ಎಫ್‌ಪಿಒ ಮೂಲಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಂಡರಷ್ಟೇ ಭವಿಷ್ಯ. ಕರೊನಾ ಲಾಕ್‌ಡೌನ್ ನನಗೆ ಮಾರಾಟದ ಪಾಠ ಕಲಿಸಿದೆ. ಜಿಲ್ಲಾ ತೋಟಗಾರಿಕೆ ಇಲಾಖೆ, ಬಿಬಿಎಂಪಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಿ ಮಾವಿನ ಹಣ್ಣಿನ ರೀತಿ ತರಕಾರಿಗಳಿಗೂ ನೇರ ಮಾರಾಟಕ್ಕೆ ಅನುವು ಮಾಡಿಕೊಟ್ಟರೆ ರೈತರಿಗೂ ಲಾಭವಾಗುತ್ತದೆ. ರಾಜಾರೆಡ್ಡಿ, ರೈತ ದಿಗುವಪಲ್ಲಿ, ಶ್ರೀನಿವಾಸಪುರ ತೋಟಗಾರಿಕಾ ಇಲಾಖೆ ಎನ್‌ಜಿಒಗಳ ನೆರವು ಪಡೆದು ಜಿಲ್ಲೆಯ ರೈತರು ತರಕಾರಿಗಳನ್ನು ನೇರವಾಗಿ ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಿಗೆ ಸರಬರಾಜು ಮಾಡಲು ಅವಕಾಶ ಕಲ್ಪಿಸಿರುವುದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಎಂ. ಗಾಯತ್ರಿ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಕೋಲಾರ