ಜಿಲ್ಲೆ

ಮಾರಕ ನೀತಿಗಳ ಕೈಬಿಡಿ

ಚಿಕ್ಕಬಳ್ಳಾಪುರ  ರೈತರು ಮತ್ತು ಕೃಷಿಯನ್ನು ಕಾರ್ಪೋರೇಟ್ ಕಂಪನಿಗಳ ಮರ್ಜಿಗೊಳಗಾಗಿಸುವ ಮಾರಕ ನೀತಿಗಳ ಜಾರಿ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘ, ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಬುಧವಾರ ಪ್ರತಿಭಟಿಸಿದರು.

ನಗರದ ವಾಪಸಂದ್ರದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದ ಹೋರಾಟಗಾರರು, ಶಿಡ್ಲಘಟ್ಟ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಬಳಿಕ ಮಾರಕ ನೀತಿಗಳ ಕರಡು ಪ್ರತಿಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕೃಷಿ ಕೂಲಿಕಾರರ ಸಂಘದ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ಕಾರ್ಪೋರೇಟ್ ಕಂಪನಿಗಳ ಹಿತ ಕಾಪಾಡುವ ಏಕೈಕ ಉದ್ದೇಶದ ಕೇಂದ್ರ ಸರ್ಕಾರದ ನೀತಿಗಳು ರೈತರು, ಕೂಲಿಕಾರರನ್ನು ಆಶಕ್ತರನ್ನಾಗಿಸುತ್ತಿವೆ. ಬಡ ಮತ್ತು ಮಧ್ಯಮ ವರ್ಗದ ಜನರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡುತ್ತಿವೆ. ಬಂಡವಾಳ ಶಾಹಿಗಳ ಪ್ರಾಬಲ್ಯ ಹೆಚ್ಚಳದಿಂದ ದೇಶವು ದೊಡ್ಡ ಗಂಡಾಂತರ ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಬೆಂಬಲ) ಸುಗ್ರೀವಾಜ್ಞೆ, ಬೆಲೆ ಖಾತ್ರಿ, ಕೃಷಿ ಸೇವೆಗಳ ಕುರಿತ ರೈತರ (ಸಶಕ್ತೀಕರಣ ಮತ್ತು ರಕ್ಷಣೆ) ಒಪ್ಪಂದ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗಳಿಗೆ ವಿವೇಚನಾ ರಹಿತವಾಗಿ ಸಚಿವ ಸಂಪುಟ ಅನುಮೋದನೆಯು ಸಂವಿಧಾನದ ಒಕ್ಕೂಟ ತತ್ವಗಳ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆರೊ ೀಪಿಸಿದರು.60 ರ ದಶಕದಲ್ಲಿ ದೊಡ್ಡ ವ್ಯಾಪಾರಸ್ಥರು ಮತ್ತು ಖರೀದಿದಾರರನ್ನು ನಿಯಂತ್ರಿಸಲು ಎಪಿಎಂಸಿ ಕಾಯ್ದೆಗಳನ್ನು ಪರಿಚಯಿಸಿದ್ದು ಹರಾಜು ವ್ಯವಸ್ಥೆಯಿಂದ ಕೃಷಿ ಉತ್ಪನ್ನಗಳ ಖರೀದಿಗೆ ಪೈಪೋಟಿ ಹೆಚ್ಚಾಗಿದೆ. ಆದರೆ, ಇದೀಗ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ನೇರ ಖರೀದಿಗೆ ಅವಕಾಶ ಹೆಸರಿನಲ್ಲಿ ಪುನಃ ಹಳೇ ವ್ಯವಸ್ಥೆಗೆ ನಾಂದಿ ಹಾಡಲಾಗುತ್ತಿದೆ ಎಂದು ಟೀಕಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ಕರೊನಾ ಲಾಕ್ ಡೌನ್‌ಗೆ ಬಡ ಮತ್ತು ಮಧ್ಯಮ ವರ್ಗದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಚೇತರಿಸಿಕೊಳ್ಳಲು ಬಡ ಕೂಲಿ ಕಾರ್ಮಿಕರ ಖಾತೆಗೆ ತಲಾ 10 ಸಾವಿರ ಮತ್ತು ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ ರೈತರ ಖಾತೆಗೆ ತಲಾ 18 ಸಾವಿರ ರೂ ಜಮಾ, ನರೇಗಾದಡಿ 200 ದಿನ ಕೆಲಸ ಮತ್ತು ದಿನಗೂಲಿ 600 ರೂ ನಿಗದಿ, ಕೃಷಿ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಮಾರಕ ನೀತಿಗಳನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕೃಷಿ ಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯೆ ಬಿ.ಸಾವಿತ್ರಮ್ಮ, ಮುಖಂಡರಾದ ಸೋಮು, ಮುನಿಯಪ್ಪ, ವೆಂಕಟರಾಯಪ್ಪ, ನಾಗೇಶ್, ರಾಮಕೃಷ್ಣ ಮತ್ತಿತರರು ಭಾಗವಹಿಸಿದ್ದರು.