ಜಿಲ್ಲೆ

ಮಾನಸಿಕ ಸದೃಢತೆಗೆ ಯೋಗ ಸಹಕಾರಿ

ಚಿತ್ರದುರ್ಗ: ದೈಹಿಕ ಆರೋಗ್ಯ, ಮಾನಸಿಕ ಸದೃಢತೆಗೆ ಯೋಗ ಸಹಕಾರಿ ಎಂದು ಎಂಎಲ್‌ಸಿ ಕೆ.ಎಸ್.ನವೀನ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.
ಬದುಕಿನಲ್ಲಿ ಅನೇಕ ಸವಾಲುಗಳನ್ನು ಎದುರಿಸಲು ಅಗತ್ಯವಿರುವ ಮಾನಸಿಕ ಸದೃಢತೆಗೆ ಹಾಗೂ ಒತ್ತಡಮುಕ್ತ ಜೀವನಕ್ಕೆ ಯೋಗಾಭ್ಯಾಸದ ಅಗತ್ಯವಿದೆ. ಒತ್ತಡದಿಂದ ಯುವಜನರು ಹೃದಯಾಘಾತಕ್ಕೆ ಒಳಗಾಗುವುದನ್ನು ನಿತ್ಯವೂ ಕಾಣುತ್ತಿದ್ದೇವೆ. ಅನೇಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಇವುಗಳೆಲ್ಲವೂಗಳಿಗೂ ಯೋಗದಿಂದ ಪರಿಹಾರ ದೊರಕಲಿದೆ ಎಂದರು.
ಜಗತ್ತಿಗೆ ಯೋಗ ಪರಿಚಯಿಸಿದ ಕೀರ್ತಿ ಭಾರತದ್ದು, ವಿಶ್ವಸಂಸ್ಥೆ 2014ರಲ್ಲಿ ಸರ್ವಾನುಮತದಿಂದ ಜೂ.21ನ್ನು ಯೋಗ ದಿನವೆಂದು ಘೋಷಿಸಿದೆ. 187 ದೇಶಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯೋಗವನ್ನು ವಿಶ್ವಕ್ಕೆ ಪರಿಚಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮೀಜಿ ಅವರು ಯೋಗವನ್ನು ಹಳ್ಳಿ-ಹಳ್ಳಿಗೆ ಕೊಂಡೊಯ್ದರು. ನಟ ಡಾ.ರಾಜಕುಮಾರ್ ಅವರು ಯೋಗಕ್ಕೆ ಜನಪ್ರಿಯತೆ ತಂದುಕೊಟ್ಟರು ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಯೋಗ ದೇಶದ ಸಾಂಸ್ಕೃತಿಕತೆಯ ಪ್ರತೀಕವಾಗಿದೆ ಎಂದು ತಿಳಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ ಮಾತನಾಡಿದರು.
ಚಿತ್ರದುರ್ಗ ಅಮೃತ ಆಯುರ್ವೇದ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಯೋಗ ನೃತ್ಯ ಪ್ರದರ್ಶಿಸಿದರು. ನಗರದ ನಿಸರ್ಗ ಯೋಗ ಕೇಂದ್ರದ ಯೋಗಗುರು ಶಿವಲಿಂಗಪ್ಪ ವೇದಿಕೆ ಮೇಲೆ ಯೋಗಾಭ್ಯಾಸ ನಡೆಸಿ ಗಮನ ಸೆಳೆದರು.
ಯೋಗ ಶಿಕ್ಷಕ ಭರಮಸಾಗರದ ತಿಪ್ಪೇಸ್ವಾಮಿ, ಯೋಗಭ್ಯಾಸದ ಆಸನಗಳ ಮಹತ್ವ ತಿಳಿಸಿದರು. ಈ ಬಾರಿಯ ಘೋಷವಾಕ್ಯ ಸ್ವಂತ ಹಾಗೂ ಸಮಾಜಕ್ಕಾಗಿ ಯೋಗ ಎಂಬುದನ್ನು ಸಾರುವ ನಿಟ್ಟಿನಲ್ಲಿ ಸಾವಿರಕ್ಕೂ ಹೆಚ್ಚು ಯೋಗಾಸಕ್ತರು 45 ನಿಮಿಷಗಳ ಕಾಲ ಸಾಮೂಹಿಕ ಯೋಗಾಭ್ಯಾಸದಲ್ಲಿ ತೊಡಗಿದ್ದರು.
ಎಸಿ ಎಂ.ಕಾರ್ತಿಕ್, ಎಎಸ್‌ಪಿಗಳಾದ ಎಸ್.ಜೆ.ಕುಮಾರಸ್ವಾಮಿ, ಲಕ್ಷ್ಮೀನಾರಾಯಣ, ನಗರಸಭೆ ಆಯುಕ್ತೆ ಎಂ.ರೇಣುಕಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ, ಮಹಿಳಾ ಸಮಾಜದ ಉಪಾಧ್ಯಕ್ಷೆ ಮೋಕ್ಷಾ ರುದ್ರಸ್ವಾಮಿ, ಯೋಗಗುರು ಎಲ್.ಎಸ್.ಚಿನ್ಮಯಾನಂದ ಹಾಗೂ ವಿವಿಧ ಸಂಘ, ಸಂಸ್ಥೆಗಳ ಸದಸ್ಯರು, ಜಿಲ್ಲೆಯ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಆಯುಷ್ ವೈದ್ಯಾಧಿಕಾರಿ ಡಾ.ಶಿವಕುಮಾರ್ ನಿರೂಪಿಸಿದರು. ವೈದ್ಯಾಧಿಕಾರಿ ಗಿರೀಶ್ ಸ್ವಾಗತಿಸಿದರು. ವೈದ್ಯಾಧಿಕಾರಿ ಪ್ರಶಾಂತ್ ವಂದಿಸಿದರು.

*ಕೋಟ್
ಯೋಗವನ್ನು ಯಾವುದೇ ಒಂದು ಧರ್ಮಕ್ಕೆ ಸೀಮಿತಗೊಳಿಸಬಾರದು. ವಿಶ್ವದ ಎಲ್ಲ ರಾಷ್ಟ್ರ ಗಳು ಯೋಗದ ಮಹತ್ವವನ್ನು ಅರಿಯುತ್ತಿವೆ. ಯೋಗಾಸಕ್ತರು ಮಲ್ಲಾಡಿಹಳ್ಳಿ ಆಶ್ರಮಕ್ಕೆ ಭೇಟಿ ನೀಡಿ ರಾಘವೇಂದ್ರ ಸ್ವಾಮೀಜಿ ಅವರ ಯೋಗ ಸಾಧನೆಗಳನ್ನು ಅರಿಯಬೇಕು.
ಎಂ.ಕೆ.ತಾಜ್‌ಪೀರ್, ಕುಡಾ ಅಧ್ಯಕ್ಷ