ಸೋಮವಾರಪೇಟೆ: ಬೇಸಿಗೆ ಶಿಬಿರಗಳು ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಕಾರಿ ಎಂದು ಕಲಾವಿದ ಯೋಗೇಶ್ ಅಭಿಪ್ರಾಯಪಟ್ಟರು.
ಬೆಟ್ಟದಳ್ಳಿ ಯಶೋದೆ ರಂಗ ಟ್ರಸ್ಟ್ ಹಾಗೂ ಸಾಂದೀಪನಿ ಪ್ರೌಢಶಾಲೆ ಸಹಯೋಗದಲ್ಲಿ ಸಾಂದೀಪನಿ ಶಾಲೆ ಆವರಣದಲ್ಲಿ ಶನಿವಾರದಿಂದ ಪ್ರಾರಂಭವಾದ ಮಕ್ಕಳ ಕಲಾ ಕಲಿಕೆ ಬೇಸಿಗೆ ಶಿಬಿರದಲ್ಲಿ ಮಾತನಾಡಿದರು. ಮಕ್ಕಳಲ್ಲಿ ಅಡಗಿರುವ ಕಲಾ ಪ್ರತಿಭೆಯನ್ನು ಹೊರತೆಗೆಯಲು ಶಿಬಿರಗಳು ಸಹಕಾರಿಯಾಗಿದೆ ಎಂದರು.
ಶಿಬಿರ ಉದ್ಘಾಟಿಸಿದ ಚೌಡ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಮಾತನಾಡಿ, ವರ್ಷವಿಡೀ ಪಾಠ ಪ್ರವಚಗಳಲ್ಲೇ ತೊಡಗಿರುವ ಮಕ್ಕಳು ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳ ಮನಸ್ಸು ಬದಲಾವಣೆ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್.ಮಹೇಶ್, ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ್, ಶಿಕ್ಷಕಿ ವಸಂತಿ, ಶಿಬಿರದ ಸಂಚಾಲಕ ನಿಶಾಂತ್ ಮುತ್ತಣ್ಣ, ನಿರ್ದೇಶಕ ಗಣೇಶ್ ಎಂ.ಭೀಮನ ಕೊಣೆ ಇದ್ದರು.