ಜಿಲ್ಲೆ

ಮಾನಸಿಕ ಬಡತನ ನಿವಾರಣೆಯಾಗಲಿ

ಧಾರವಾಡ: ಜನರಲ್ಲಿರುವ ಮಾನಸಿಕ ಬಡತನ ಮೊದಲು ನಿವಾರಣೆಯಾದರೆ ಆರ್ಥಿಕ ಬಡತನ ತನ್ನಿಂದ ತಾನೇ ನಿವಾರಣೆಯಾಗುತ್ತದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ರಾಯಾಪುರದ ಜ್ಞಾನ ವಿಕಾಸ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಗತಿ ಬಂಧು ಸ್ವ- ಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷರ ಪ್ರಗತಿ ಚಿಂತನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಸಹಾಯ ಸಂಘ ಕೇವಲ ಹಣ ನೀಡುವ ಸಂಸ್ಥೆಯಾಗದೆ ಸ್ವ ಉದ್ಯೋಗಕ್ಕೆ ಅವಕಾಶ ಕಲ್ಪಿಸಿ ಪ್ರೋತ್ಸಾಹ ನೀಡಿ ಜನರನ್ನು ಪರಿವರ್ತನೆ ಮಾಡುವ ಸಂಘವಾಗಿದೆ. ಸಂಘ ನೀಡುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಚಿಂತನೆಯಿಂದ ದೂರವಾಗಬೇಕು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಗಳಿಂದ ಒಕ್ಕೂಟದ ಅಧ್ಯಕ್ಷರು ಸಮಗ್ರ ಮಾಹಿತಿ ಪಡೆದು ಸಂಘದ ಸದಸ್ಯರಿಗೆ ಎಲ್ಲ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿಸಬೇಕು. ಅಂದಾಗ ಮಾತ್ರ ಸದಸ್ಯರು ಎಲ್ಲ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.

ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಮಾತನಾಡಿ, ಎಲ್ಲರಂತೆ ನಾವೂ ಬದಲಾವಣೆ ಆಗಬೇಕು ಎಂಬ ಮನಸ್ಸಿದ್ದಾಗ ಜೀವನದಲ್ಲಿ ಪರಿವರ್ತನೆ ಹೊಂದಲು ಸಾಧ್ಯ. ಜೀವನದಲ್ಲಿ ಪರಿವರ್ತನೆಯಾದಾಗ ಮಾತ್ರ ನಮ್ಮ ಎಲ್ಲ ಸಮಸ್ಯೆಗಳಿಂದ ಮುಕ್ತಿ ಹೊಂದಲು ಸಾಧ್ಯ. ಯೋಜನೆ ಲಾಭಗಳನ್ನು ಅನೇಕ ಜನರು ಪಡೆದು ಜೀವನದಲ್ಲಿ ಯಶಸ್ಸು ಪಡೆದಿದ್ದಾರೆ ಎಂದರು.

ಕೇಂದ್ರದ ನಿರ್ದೇಶಕ ಡಾ. ಪ್ರಕಾಶ ಭಟ್, ಎಸ್​ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರಕುಮಾರ, ಯೋಜನಾಧಿಕಾರಿಗಳು, ಒಕ್ಕೂಟ ಅಧ್ಯಕ್ಷರು, ಸದಸ್ಯರು, ಸೇವಾಪ್ರತಿನಿಧಿಗಳು, ಇತರರಿದ್ದರು.

ವಿವಿಧ ತಾಲೂಕಿನ ಒಕ್ಕೂಟಗಳಿಗೆ ಅತ್ಯುತ್ತಮ ಸೇವಾ ಪ್ರಶಸ್ತಿ ನೀಡಲಾಯಿತು. ಒಕ್ಕೂಟಗಳ ಅಧ್ಯಕ್ಷರು ಅನಿಸಿಕೆ ಹಂಚಿಕೊಂಡರು. ಯೋಜನೆ ನಿರ್ದೇಶಕ ಸುರೇಶ ಮೈಲಿ ಸ್ವಾಗತಿಸಿದರು. ಯೋಜನಾಧಿಕಾರಿ ಉಲ್ಲಾಸ ಮೇಸ್ತ ನಿರೂಪಿಸಿದರು. ಕುಸುಮಾಧರ ಕೆ. ವಂದಿಸಿದರು.