ಚಿತ್ರದುರ್ಗ: ತೀವ್ರತರ ಮಾನಸಿಕ ಕಾಯಿಲೆ ಸ್ಕಿಜೋಫ್ರೇನಿಯಾವನ್ನು ಸೂಕ್ತ ಚಿಕಿತ್ಸೆ ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ‌್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಒ.ನಾಗರಾಜ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಶ್ವ ಸ್ಕಿಜೋಫ್ರೇನಿಯಾ ದಿನದ ಅಂಗವಾಗಿ ಗೋನೂರು ಗ್ರಾಮದಲ್ಲಿನ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಮನೋಚೈತನ್ಯ’ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಕಾಯಿಲೆ ಕುರಿತ ಜಾಗೃತಿಗಾಗಿ ವಿಶ್ವದಾದ್ಯಂತ ವಿಶ್ವ ಸ್ಕಿಜೋಫ್ರೇನಿಯಾ ದಿನವನ್ನು ಆಚರಿಸಲಾಗುತ್ತದೆ. ಈ ಕಾಯಿಲೆಗೆ ಒಳಗಾದವರನ್ನು ಕಟ್ಟುವುದು, ಕೂಡಿ ಹಾಕುವುದು, ಕೀಳಾಗಿ ಕಾಣುವುದು ಸಲ್ಲದು. ಈ ರೋಗವನ್ನು ಶೀಘ್ರದಲ್ಲಿಯೇ ಗುಣಪಡಿಸಬಹುದಾಗಿದ್ದು, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದೆ ಎಂದರು.
ಪ್ರತಿ 100 ಜನರಲ್ಲಿ ಒಬ್ಬರು ಈ ಕಾಯಿಲೆ ತುತ್ತಾಗುತ್ತಾರೆ. ರೋಗಿಗೆ ನೈಜ ಜಗತ್ತಿನ ಜತೆ ಸಂಪರ್ಕವಿರುವುದಿಲ್ಲ. ಆತ ಭ್ರಮೆ ಅಥವಾ ಭ್ರಾಂತಿಯಲ್ಲಿರುತ್ತಾನೆ. ಸಕಾಲದಲ್ಲಿ ಚಿಕಿತ್ಸೆ ಕೊಡಿಸಿದಲ್ಲಿ ಸಂಪೂರ್ಣವಾಗಿ ಗುಣ ಮಾಡಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ‌್ಯಕ್ರಮದ ಕ್ಲಿನಿಕಲ್ ಸೈಕಾಲಜಿಸ್ಟ್ ಟಿ.ಶ್ರೀಧರ ಮಾತನಾಡಿ, ತನ್ನ ಕಾಯಿಲೆ ಬಗ್ಗೆ ಅರಿವಿಲ್ಲದೆ ವಿಚಿತ್ರವಾಗಿ ವರ್ತಿಸುವುದು, ಮಾತನಾಡುವುದು ಹಾಗೂ ದೈನಂದಿನ ಕಾರ‌್ಯ, ಜವಾಬ್ದಾರಿಗಳಲ್ಲಿ ವ್ಯತ್ಯಾಸವಾಗುವ ಲಕ್ಷಣ ಕಂಡುಬಂದಲ್ಲಿ ಮನೋವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು ಎಂದರು.
ಬಸವೇಶ್ವರ ವೈದ್ಯಕೀಯ ಕಾಲೇಜು ಮನೋ ವೈದ್ಯಕೀಯ ಸ್ನಾತಕೋತ್ತರ ಕೇಂದ್ರದ ವೈದ್ಯಾಧಿಕಾರಿ ಡಾ.ಅರವಿಂದ್ ಸೆಲ್ವ, ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಮಹದೇವ್, ಆರೋಗ್ಯ ನಿರೀಕ್ಷಣಾಧಿಕಾರಿ ವೈ.ತಿಪ್ಪೇಶ್,ಚೂಡಾಮಣಿ,ಪ್ರತಿಭಾ,ತಿಪ್ಪೇರುದ್ರಮ್ಮ ಮತ್ತಿತರರು ಇದ್ದರು.