ಜಿಲ್ಲೆ

ಮಾನಸಿಕ ಒತ್ತಡಕ್ಕೆ ಯೋಗ-ಧ್ಯಾನ ಸಹಕಾರಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಮಾನಸಿಕ ಆರೋಗ್ಯ ಕಾಪಾಡಲು ತೊಳಲಾಟವನ್ನು ಬಿಟ್ಟು ಯೋಗ, ಧ್ಯಾನ, ಪ್ರಾಣಾಯಾಮ ಮುಂತಾದ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಹೊಸಮನೆ ಹೇಳಿದರು.
ಇಲ್ಲಿಯ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಪಂ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಹಾಗೂ ವಿವಿಯ ಎನ್‌ಎಸ್‌ಎಸ್ ಘಟಕದ ಜಂಟಿ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸೇವಾನಿರತ ಸಿಬ್ಬಂದಿ ಜತೆಗೆ ಮಕ್ಕಳಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತಿದೆ. ಇವುಗಳನ್ನು ತಡೆಗಟ್ಟಲು ಎಲ್ಲರೂ ಮುಕ್ತ ಚರ್ಚೆ ಮಾಡಬೇಕು ಎಂದರು.
ವಿಎಸ್‌ಕೆ ವಿವಿ ಕುಲಪತಿ ಪ್ರೊ. ಎಂ. ಮುನಿರಾಜು ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸರ್ಕಾರಗಳು ಸೇವಾನಿರತ ಸಿಬ್ಬಂದಿಯ ಆರೋಗ್ಯ ಕಾಪಾಡಲು ವಿಶೇಷ ಆಸಕ್ತಿ ವಹಿಸಿವೆ. ದಿನವೂ ದೈಹಿಕ ಕಸರತ್ತು ನಡೆಸುವುದರಿಂದ ಮಾನಸಿಕ ಆರೋಗ್ಯದಲ್ಲಿ ಹಿಡಿತ ಸಾಧಿಸಬಹುದು. ವಿವಿಯಲ್ಲಿ ಮನಶಾಸ್ತ್ರ ಅಧ್ಯಯನ ವಿಭಾಗವನ್ನು ಆರಂಭಿಸಿ ಮಕ್ಕಳಿಗೆ ಮಾನಸಿಕ ಆರೋಗ್ಯದ ಮತ್ತು ಅವುಗಳ ಕುರಿತ ಉದ್ಯೋಗವಕಾಶಗಳಿಗೆ ದಾರಿ ಮಾಡಿಕೊಡುವ ಉದ್ದೇಶವಿದೆ ಎಂದರು.
ಜಿಲ್ಲಾ ಮನೋರೋಗ ತಜ್ಞ ಡಾ. ರೋಹನ್ ವನಗುಂದಿ ಮಾತನಾಡಿ, ಮಾನವನು ದೈಹಿಕ ಆರೋಗ್ಯಕ್ಕೆ ನೀಡಿದಷ್ಟು ಪ್ರಾತಿನಿಧ್ಯತೆ ಮಾನಸಿಕ ಆರೋಗ್ಯಕ್ಕೆ ನೀಡುತ್ತಿಲ್ಲ. ಎಲ್ಲರ ಜೀವನವು ಸದಾ ಏರಿಳಿತಗಳಿಂದ ಕೂಡಿರುತ್ತದೆ. ಕೆಲಸದ ಸ್ಥಳ ಮತ್ತು ಕೌಟುಂಬಿಕ ಒಡನಾಟದಲ್ಲಿ ಸದ್ದಿಲ್ಲದೆ ಮನುಷ್ಯರ ಮೇಲೆ ಒತ್ತಡ ಹೆಚ್ಚಿಸುತ್ತಿವೆ. ವಾರಕ್ಕೊಂದು ದಿನ ಮೊಬೈಲ್ ಬಳಕೆ ನಿಲ್ಲಿಸಿದಲ್ಲಿ ಮಾನಸಿಕ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ವೀರೇಂದ್ರ ಕುಮಾರ, ಡಿಎಚ್‌ಒ ವೈ. ರಮೇಶಬಾಬು ಮಾತನಾಡಿದರು.