ಜಿಲ್ಲೆ

ಮಾನಸಿಕ ಒತ್ತಡ ನಿಯಂತ್ರಣದಲ್ಲಿಟ್ಟುಕೊಳ್ಳಿ

ಬೆಟ್ಟದಪುರ:ದೈನಂದಿನ ಕೆಲಸಗಳ ಒತ್ತಡದಿಂದ ಬಿಪಿ, ಸಕ್ಕರೆ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿದ್ದು, ಪ್ರತಿಯೊಬ್ಬರೂ ಮಾನಸಿಕ ಒತ್ತಡವನ್ನು ನಿಯಂತ್ರಣ ಮಾಡಿಕೊಳ್ಳಬೇಕು ಎಂದು ಚಪ್ಪರದಹಳ್ಳಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆರ್.ಸಂದೀಪ್ ಹೇಳಿದರು.


ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಆವರಣದಲ್ಲಿ ಬುಧವಾರ ಶ್ರೀ ಶಾರದಾಂಬ ಜ್ಞಾನ ವಿಕಾಸ ಕೇಂದ್ರದ ಎರಡನೇ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.


ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆಧುನಿಕ ಆಹಾರ ಪದ್ಧತಿಯು ಮನುಷ್ಯ ಕುಲದ ಜೀವನ ಪದ್ಧತಿಯನ್ನೇ ಬದಲಾವಣೆ ಮಾಡಿದೆ. ಹಾಗಾಗಿ ಉತ್ತಮ ಅರೋಗ್ಯಕ್ಕಾಗಿ ಒಳ್ಳೆಯ ಆಹಾರ ಸೇವಿಸಬೇಕು. ಜತೆಯಲ್ಲಿ ವ್ಯಾಯಾಮ ಮಾಡುವ ಅಭ್ಯಾಸ ರೂಢಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ವಲಯ ಯೋಜನಾಧಿಕಾರಿ ಸಂತೋಷ್ ಕುಮಾರ್ ಮಾತನಾಡಿ, ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚು ನಿಗಾ ವಹಿಸಬೇಕು. ಸಿಕ್ಕಿಸಿಕ್ಕಿದೆಲ್ಲವನ್ನು ಮಕ್ಕಳಿಗೆ ತಿನಿಸಬಾರದು. ಸಿರಿಧಾನ್ಯವು ಆರೋಗ್ಯಕ್ಕೆ ಉತ್ತಮವಾಗಿದ್ದು, ಇದರ ಸೇವನೆಯಿಂದ ಆರೋಗ್ಯ ವೃದ್ಧಿಸಲಿದೆ ಎಂದರು.

ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಬಿ.ಎಸ್.ಜಯಲಕ್ಷ್ಮೀ, ಉಪಾಧ್ಯಕ್ಷೆ ಗೀತಾ, ಶಿಕ್ಷಕ ಎಸ್.ಮಹೇಶ್, ಸಮುದಾಯ ಆರೋಗ್ಯಾಧಿಕಾರಿ ರಚನಾ, ಮೇಲ್ವಿಚಾರಕ ಜಗನ್ನಾಥ್, ಸೇವಾ ಪ್ರತಿನಿಧಿಗಳಾದ ವೀಣಾ, ಬಿಂದು, ಮಹಿಳಾ ಸಂಘದ ಸದಸ್ಯರು, ಗ್ರಾಮಸ್ಥರು ಇದ್ದರು.