ಬೇಲೂರು: ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯಿಂದ ಪಟ್ಟಣ ಸಮೀಪದ ಯುನೈಟೆಡ್ ಆಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ವಿದ್ಯಾರ್ಥಿಗಳಿಗಾಗಿ ಮಾನಸಿಕ ಆರೋಗ್ಯ ಅರಿವು ಹಾಗೂ ಚಿತ್ರಕಲಾ ಸ್ಪರ್ಧೆ ಆಯೋಜಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷೆ ತಾರಾಮಣಿ ಮಾತನಾಡಿ, ಮಾನಸಿಕ ಆರೋಗ್ಯವು ಪ್ರತಿಯೊಬ್ಬರ ಆಲೋಚನೆ, ಭಾವನೆ ಮತ್ತು ವರ್ತನೆಗಳನ್ನು ಒಳಗೊಂಡಿರುತ್ತದೆ. ಇದು ದೈನಂದಿನ ಜೀವನದ ಒತ್ತಡಗಳನ್ನು ನಿಭಾಯಿಸಲು ಹಾಗೂ ಸಂಬಂಧಗಳನ್ನು ನಿರ್ವಹಿಸಲು ಮತ್ತು ಬದುಕಿನ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯದ ಮೇಲೆ ಅವಲಂಬಿತವಾಗುವುದರಿಂದ ವಿದ್ಯಾರ್ಥಿಗಳು ದೈಹಿಕ ಆರೋಗ್ಯದಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನಹರಿಸಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಉತ್ತಮ ಸಾಧನೆಯತ್ತ ಮುನ್ನುಗ್ಗಲು ಸಾಧ್ಯವಾಗುತ್ತದೆ ಎಂದರು.
ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಡಾ.ಚಂದ್ರಮೌಳಿ ಮಾತನಾಡಿ, ಇತ್ತೀಚಿನ ದಿನಗಳ ಒತ್ತಡದ ಬದುಕು ಮನುಷ್ಯನ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಪಾಲಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಬೆಳವಣಿಗೆಯ ದೃಷ್ಟಿಯಿಂದ ಅವರಿಗೆ ಆರೋಗ್ಯದ ಅರಿವು ಮೂಡಿಸಲು ಮುಂದಾಗಬೇಕು. ವಿದ್ಯಾರ್ಥಿಗಳಿಗೆ ವಿದ್ಯೆಯೊಂದಿಗೆ ಪ್ರತನಿತ್ಯ ಯೋಗ, ದೈಹಿಕ ಕಸರತ್ತು, ಉತ್ತಮವಾದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಯುನೈಟೆಡ್ ಆಕಾಡೆಮಿ ಆಂಗ್ಲಾ ಮಾಧ್ಯಮ ಶಾಲೆ ಕಾರ್ಯದರ್ಶಿ ಎಚ್.ಎಂ.ದಿನೇಶ್ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ವೃದ್ಧಾಶ್ರಾಮಗಳ ಬೆಳವಣಿಗೆ ನಿಜಕ್ಕೂ ಸಧೃಡ ಸಮಾಜಕ್ಕೆ ಮಾರಕವಾಗಿದೆ. ಮಕ್ಕಳು ವಯೋವೃದ್ಧರೊಂದಿಗೆ ಬೆಳೆದರೆ ಮಾತ್ರ ಸಂಸ್ಕಾರ ರೂಡಿಸಿಕೊಳ್ಳಲು ಸಾಧ್ಯ. ಆದ್ದರಿಂದ ಮಕ್ಕಳಿಗೆ ಚಿಕ್ಕಂದಿನಲ್ಲೆ ಮಾನಸಿಕವಾಗಿ ಮತ್ತು ಆರೋಗ್ಯವಾಗಿರಲು ಅರಿವು ಮೂಡಿಸಿದರೆ ಉತ್ತಮ. ಈ ನಿಟ್ಟಿನಲ್ಲಿ ಬೇಲೂರಿನಲ್ಲಿ ಲಯನ್ಸ್ ಸಂಸ್ಥೆಯ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಪ್ರಾಂತೀಯ ಅಧ್ಯಕ್ಷ ಅಬ್ದುಲ್ ಲತೀಫ್, ಕಾರ್ಯದರ್ಶಿ ಆದರ್ಶ, ಖಜಾಂಚಿ ಸಂತೋಷ್, ನಾಟಿ ವೈದ್ಯ ಉಮೇಶ್, ಡಾ.ರೋಹನ್, ವೈ.ಬಿ.ಸುರೇಶ್, ಕೆ.ಎಲ್.ಸುರೇಶ್, ಪುಟ್ಟಸ್ವಾಮಿ, ಹೆಬ್ಬಾಳು ಹಾಲಪ್ಪ, ಸ್ವರ್ಣ, ಮುಕ್ತಿಯಾರ್, ಶಿಕ್ಷಕರಾದ ದೀಪ, ಅಸ್ಮಂ ಇತರರಿದ್ದರು.